ಮೊದಲೇ ಧೂಳು ತುಂಬಿದ ಮಣ್ಣು ಹಾದಿ. ನೆತ್ತಿ ಸುಡುವ ಉರಿ ಬಿಸಿಲು. ಕೈಯಲ್ಲಿ ತರಕಾರಿಯ ಚೀಲ ಹಿಡಿದು ಮನೆಯ ದಾರಿ ಹಿಡಿದವಳಿಗೆ ಅದೇನಾಯ್ತೋ ಗೊತ್ತಿಲ್ಲ, ಕೆಮ್ಮು ಅಲೆಅಲೆಯಾಗಿ ಬರತೊಡಗಿತು. ಏನು ಮಾಡಿದರೂ ಕಡಿಮೆಯಾಗುತ್ತಿಲ್ಲ. ಕೆಮ್ಮಿ ಕೆಮ್ಮಿ ಕಣ್ಣಲ್ಲಿ ನೀರು ಸುರಿಯತೊಡಗಿತು. ನೆತ್ತಿಗೆ ಹತ್ತಿತ್ತೋ ಏನೋ ಉಸಿರೆಳೆದುಕೊಳ್ಳಲೂ ಕಷ್ಟವಾಗುವಂತಹ ಕೆಮ್ಮು. ನಿಲ್ಲಲೂ ಆಗುತ್ತಿಲ್ಲ. ಹತ್ತಿರದಲ್ಲೆಲ್ಲೂ ಮನೆಯಿಲ್ಲ. ಸುತ್ತಮುತ್ತಲಿನವರು ನನ್ನೆಡೆಗೆ ಒಂದು ವಿಚಿತ್ರ ನೋಟವೆಸೆದು ನಡೆದು ಬಿಟ್ಟರು. ಆ ಹೊತ್ತಿಗೆ ಅದೆಲ್ಲಿದ್ದನೋ ಪುಟ್ಟ ಹುಡುಗನೊಬ್ಬ ಬಂದು ಆಂಟಿ ನಿಮ್ಮ ಹತ್ತಿರ ನೀರಿಲ್ವಾ ಕುಡೀರಿ ಕಡಿಮೆಯಾಗುತ್ತೆ ಎಂದ. ಕೆಮ್ಮುತ್ತಲೇ ಇಲ್ಲವೆಂದು ತಲೆಯಾಡಿಸಿದೆ. ತಕ್ಷಣ ಓಡಿ ಹೋದ. ಆ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ.
ಹಾಗೆಯೇ ಹತ್ತು ಹೆಜ್ಜೆ ಹೋದವಳಿಗೆ ನಡೆಯಲೂ ಆಗದೆ ರಸ್ತೆಯ ಬದಿಗೆ ಸರಿದು ನಿಂತು ಬಿಟ್ಟೆ. ನಿಲ್ಲಲು ನೆರಳೂ ಇಲ್ಲ. ಇತ್ತ ಏನು ಮಾಡಿದರೂ ಕೆಮ್ಮು ನಿಲ್ಲುತ್ತಿಲ್ಲ. ಕೆಮ್ಮಿಕೆಮ್ಮಿ ಎದೆನೋವು ಬಂದುಬಿಟ್ಟಿತು. ಅಷ್ಟರಲ್ಲೇ ಓಡುತ್ತಾ ಬಂದ ಆ ಪುಟ್ಟ ಹುಡುಗ. ತೇಕುತ್ತಲೇ “ಆಂಟಿ ಇದನ್ನು ತಿನ್ನಿ ಕಡಿಮೆಯಾಗತ್ತೆ” ಎಂದು ಕೈಚಾಚಿದ. ಅವನ ಪುಟ್ಟ ಕೈಯಲ್ಲಿ ಅಡಿಕೆ ಹೋಳುಗಳಿದ್ದವು. ನಾನು ತೆಗೆದು ಕೊಂಡು ಬಾಯಿಗೆ ಹಾಕಿಕೊಂಡ ಮೇಲೆ “ಇನ್ನ ಕಡಿಮೆಯಾಗತ್ತೆ ಆಂಟಿ. ಕೆಮ್ಮು ಬಂದಾಗ ಅಡಿಕೆ ಬಾಯಿಗೆ ಹಾಕ್ಕೊಂಡ್ರೆ ಕಡಿಮೆಯಾಗತ್ತೆ ಅಂತ ಅಜ್ಜಿ ಹೇಳಿದ್ಲು. ಆದ್ರೆ ಒಂದ್ಸಾರಿ ಡಾಕ್ಟ್ರಿಗೆ ತೋರಿಸಿ..” ಎಂದವನೇ ನನ್ನ ಉತ್ತರಕ್ಕೂ ಕಾಯದೇ ಹೊರಟುಬಿಟ್ಟ.
ಆ ಪುಟ್ಟ ಹುಡುಗನಿಗೆ ಒಂದು ಥ್ಯಾಂಕ್ಸ್ ಹೇಳಲೂ ಆಗಲಿಲ್ಲವಲ್ಲ ಎನ್ನುವ ಕೊರಗು ಇಂದಿಗೂ ಕಾಡುತ್ತಿದೆ. “ಪುಟ್ಟಾ ತುಂಬ ತುಂಬ ಥ್ಯಾಂಕ್ಸ್. ಬರಿ ಒಂದು ಅಡಿಕೆ ಹೋಳಿಗಾಗಿ ಅಲ್ಲ. ನೀ ಮೆರೆದ ಮಾನವತ್ವಕ್ಕಾಗಿ.”
ಸಂಬಂಧಗಳೆಲ್ಲ ತೆಳುವಾಗಿ, ಪ್ರತಿ ವಿಷಯವೂ ನಾನು, ನನ್ನಿಂದ, ನನಗಾಗಿ, ನನಗೇನು ಎಂದು ‘ನಾನು’ ಸುತ್ತಲೇ ಸುತ್ತುವ ಕಾಲಘಟ್ಟದಲ್ಲಿ, ಪುಟ್ಟ ಅಡಿಕೆ ಹೋಳಿನಂತಹ ಘಟನೆಗಳು ನಮ್ಮ ಆಶಾವಾದವನ್ನು ಚಿಗುರಿಸುತ್ತವೆ.
Subscribe to:
Post Comments (Atom)
Beautifully written.Do you remember we had a a home work lesson everday where in we had to write one good deed everday.When I didnt know what to write I would write about helping the imaginary old woman cross the road.Thinking of it, there were no roads in Chikka jogi halli to cross.Sometimes I would put a thorn in the middle of the road and then take it off so I can write about it.
ReplyDeleteI am sure that kid will have lot of original good deeds in his homework book!