
ಹಲವು ದಿನಗಳ ಕೆಳಗೆ ಅತ್ಯಂತ ಆಕರ್ಷಕ ಸ್ಕೂಟಿ ಮಾದರಿಯ ವಾಹನವೊಂದನ್ನು ನೋಡಿದೆ. ತುಂಬ ಚೆನ್ನಾಗಿತ್ತು. ಯುವತಿಯೊಬ್ಬಳು ಅತ್ಯಂತ ಸರಾಗವಾಗಿ ಅದನ್ನು ನಡೆಸಿಕೊಂಡು ಸುಯ್ಯೆಂದು ಹೊರಟು ಬಿಟ್ಟಳು. ಹೆಚ್ಚು ಗಮನಿಸಲು ಆಗಲೇ ಇಲ್ಲ. ಆದರೆ ಒಂದು ಅಂಶ ಮಾತ್ರ ನನ್ನ ಗಮನ ಸೆಳೆಯಿತು. ಅದೆಂದೆರೆ ಅದಕ್ಕೆ ಹೆಡ್ಲೈಟ್ ಇಲ್ಲದೇ ಇದ್ದದ್ದು. ದಾರಿಯಲ್ಲಿ ನಡೆದು ಬರುತ್ತಿರುವಾಗಲೂ ಅದು ನನ್ನನ್ನು ಕಾಡುತ್ತಲೇ ಇತ್ತು. ಅರೆ ಹೆಡ್ಲೈಟಿಲ್ಲದ ಗಾಡಿಯಾ ಹೇಗೆ ಸಾಧ್ಯ. ಅಥವಾ ಹ್ಯಾಂಡಲ್ ಬಳಿ ಹೆಡ್ಲೈಟ್ಗೆ ಕವರ್ ಹಾಕಲಾಗಿದೆಯಾ ಹೇಗೆ? ತೆರೆ ಸರಿದಂತೆ ಅದು ತನ್ನಷ್ಟಕ್ಕೆ ತಾನೇ ಸರಿಯುತ್ತದಾ? ರಾತ್ರಿಯಾದರೆ ಹೇಗೆ ಓಡಿಸುತ್ತಾರೆ. ಹೀಗೆ ಹತ್ತಾರು ಕೋನಗಳಲ್ಲಿ ಆಲೋಚಿಸಿದರೂ ನನ್ನ ಪ್ರಶ್ನೆಗೆ ಉತ್ತರ ಹೊಳೆಯಲೇ ಇಲ್ಲ. ನನ್ನ ಮುಂದೆ ಅಂತಹುದ್ದೇ ಮತ್ತೊಂದು ವಾಹನ ಹಾದು ಹೋದಾಗಲೂ ನನಗೆ ಹೆಡ್ಲೈಟ್ ಕಾಣಿಸಲಿಲ್ಲ. ಆ ಹೆಡ್ಲೈಟ್ ನನ್ನನ್ನು ಇನ್ನಿಲ್ಲದಂತೆ ಕಾಡತೊಡಗಿತು. ಆಫೀಸಿಗೆ ಹೋದ ತಕ್ಷಣ ಅದರ ಬಗ್ಗೆ ಗೂಗಲ್ ಮಾಡಬೇಕೆಂದವಳಿಗೆ ಎಡೆಬಿಡದ ಕೆಲಸದ ನಡುವೆ ಮರೆತೇ ಹೋಯ್ತು.
ಇನ್ನೊಂದು ದಿನ ನಡೆಯುತ್ತಾ ಹೋಗುತ್ತಿದ್ದವಳ ಕಣ್ಣು ಹಾದು ಹೋದ ಆ ಸ್ಕೂಟಿ ಮಾದರಿಯ ವಾಹನದ ಮೇಲೆ ಅಯಾಚಿತವಾಗಿ ಬಿತ್ತು. ಹಾಗೆ ಬಿದ್ದಾಗಲೇ ನನಗೆ ಅಲ್ಲಿ ಹ್ಯಾಂಡಲ್ನ ಕೆಳಭಾಗದ ಗಾಲಿಯ ಮೇಲ್ಭಾಗದ ಮೇಲೆ ಥಳಥಳನೇ ಹೊಳೆಯುತ್ತಿದ್ದ ದೀಪ ಕಣ್ಣಿಗೆ ಬಿತ್ತು. ಅರೆ ಇದೇ ಅಲ್ಲವಾ ನನ್ನನ್ನು ಕಾಡುತ್ತಿದ್ದ ದೀಪ ಎಂದು ಅಚ್ಚರಿಯಾಯ್ತು.
ಸ್ಕೂಟಿ, ಕೆನೆಟಿಕ್ ಹೊಂಡಾಗಳನ್ನೇ ನೋಡಿ ಅಭ್ಯಾಸವಾಗಿದ್ದ ನನ್ನ ಕಣ್ಣು ಹ್ಯಾಂಡಲ್ ಬಳಿಯೇ ಹೆಡ್ಲೈಟನ್ನು ಹುಡುಕಿ ಸುಮ್ಮನಾಗಿ ಬಿಟ್ಟಿತ್ತು. ಅಷ್ಟೇ ಅಲ್ಲದೇ ಅರೆ ಈ ಗಾಡಿಗೆ ದೀಪವೇ ಇಲ್ಲವಲ್ಲ ಎನ್ನುವ ಭಾವವನ್ನೂ ಮೆದುಳಿಗೆ ಹೊತ್ತು ಹಾಕಿತ್ತು. ದೀಪವನ್ನು ಹುಡುಕುವ ತವಕ ಹುಟ್ಟಿತು. ಕಳೆದದ್ದನ್ನು ಹುಡುಕುವ ಆತುರದಲ್ಲಿ ಮತ್ತೆ ಮತ್ತೆ ಅದೇ ಸ್ಥಳದಲ್ಲಿ ಹುಡುಕಿ ಸುಮ್ಮನಾಗಿಬಿಟ್ಟಿತು. ಆದರೆ ಇನ್ನೊಂದು ಬಾರಿ ನೋಡಿದಾಗ ಯಾವುದೇ ಧಾವಂತವಿರಲಿಲ್ಲ. ಅಲ್ಲದೇ ಕಣ್ಣಿಗೂ ಪೂರ್ವಗ್ರಹಗಳಿರಲಿಲ್ಲ. ಹಾಗಾಗಿ ಅಲ್ಲಿಯೇ ಇದ್ದ ದೀಪ ಕಣ್ಣಿಗೆ ಬಿತ್ತು.
ಈ ಪುಟ್ಟ ಘಟನೆ ನನಗೆ ಜೀವನದ ಅತಿದೊಡ್ಡ ಪಾಠವನ್ನೇ ಕಲಿಸಿಕೊಟ್ಟಿತು. ನಮ್ಮ ದೇಹ ಮತ್ತು ಮನಸ್ಸುಗಳ ನಡವಳಿಕೆಯಂತೆ ನಮ್ಮ ಯೋಚನೆಗಳೂ ಕೂಡ ಒಂದೇ ಬಗೆಯ ಯೋಚನಾ ಧಾಟಿಗೆ ಒಗ್ಗಿಕೊಂಡು ಬಿಡುತ್ತವೆ. ಹಾಗಾಗಿ ಯಾವುದೇ ಸಮಸ್ಯೆ ಎದುರಾದಾಗಲೂ ಒಂದೇ ಬಗೆಯ ಯಾಂತ್ರಿಕ, ಸಿದ್ಧ ಉತ್ತರ ಮತ್ತು ಪ್ರತಿಕ್ರಿಯೆಗಳನ್ನೇ ನೀಡುತ್ತವೆ. ಅದರಲ್ಲಿರುವ ಹೊಸ ಉತ್ತರಗಳು ಮತ್ತು ಸಾಧ್ಯತೆಗಳು ಹೊಳಹುಗಳನ್ನು ಗುರುತಿಸಲಾಗುವುದೇ ಇಲ್ಲ. ಹೊಸದನ್ನೇನಾದರೂ ಮಾಡಬೇಕೆಂದರೂ, ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಬೇಕೆಂದರೂ ಕೂಡ ಈ ಸಿದ್ಧ ಮಾದರಿಯ ಆಲೋಚನೆಯ ಸುಳಿಯನ್ನು ಮೆಟ್ಟಿ ಬರಬೇಕು. ಹಾಂ ಅದೇ ಔಟ್ ಆಫ್ ದ ಬಾಕ್ಸ್ ಥಿಂಕಿಂಗ್ ನಮ್ಮದಾಗಬೇಕು. ಹಾಗಾದಾಗಲೇ ಹೊಸ ಅವಕಾಶಗಳು ಕಾಣುತ್ತವೆ ಮತ್ತು ಯಶಸ್ಸು ನಮ್ಮದಾಗುತ್ತದೆ.
Hmmm..A very good/keen observation.Scooty example is a simple yet accurate exmaple for out of the box thinking.
ReplyDeleteAs usual the whole writing is immaculate and fresh.