Wednesday, March 24, 2010

ಹಾದಿ


ಹತ್ತಿರದಲ್ಲೆಲ್ಲೋ ಹೋಗ ಬೇಕಿತ್ತು ಆಟೋಗಾಗಿ ಕಾಯುತ್ತಿದ್ದೆವು ಸಾಕಷ್ಟು ಖಾಲಿ ಆಟೋಗಳು ಬರುತ್ತಿದ್ದರೂ ಕೂಡಾ ನಾವು ಕೇಳಿದ ಪ್ರತಿ ಆಟೋ ಬರುವುದಿಲ್ಲವೆಂದೇ ಹೇಳುತ್ತಿತ್ತು. ಹೀಗೇಕೆ ಎಂದು ಯೋಚಿಸುವಂತಾಯ್ತು. ಆದರೆ ಅದೇ ರೋಡಿನ ಮತ್ತೊಂದು ಬದಿಗೆ ಹೋದಾಗ ನಾವು ಕೇಳಿದ ಮೊದಲ ಆಟೋದವನೇ ಹೋಗ ಬೇಕಾದ ಸ್ಥಳಕ್ಕೆ ಬರಲೊಪ್ಪಿದ. ಇದು ಮ್ಯಾನೇಜ್ಮೆಂಟ್ನ ಮೊದಲ ಪಾಠ. ಗುರಿಯನ್ನು ತಲುಪಲಾಗದಿದ್ದರೆ ದೋಷ ಗುರಿಯದ್ದಲ್ಲ ನಾವು ಹಿಡಿದ ಹಾದಿಯದ್ದು.
ಜೀವನವೂ ಹೀಗೆಯೇ ಅಲ್ಲಿ ಹಲವು ಬಾರಿ ನಿರಾಕರಣೆಗಳನ್ನು, ಸಮಸ್ಯೆಗಳನ್ನು ಎದುರಿಸ ಬೇಕಾಗಿ ಬರುತ್ತದೆ. ನನಗೇಕೆ ಹೀಗೆ ಎಂದು ಎದೆಗುಂದುವಂತಾಗುತ್ತದೆ. ಈ ಹಂತದಲ್ಲೇ ಸ್ವಾನುಕಂಪ ಇಣುಕಿನೋಡುತ್ತದೆ. ಒಂದು ಬಾರಿ ಇದರ ಹಿಡಿತಕ್ಕೆ ಬಂದೆವೆಂದೆರೆ ಮುಗಿಯಿತು ನಮ್ಮ ಎದುರಿಗಿದ್ದ ಹೆದ್ದಾರಿಯೂ ನಮಗೆ ಕಾಣಿಸುವುದಿಲ್ಲ.
ಏನು ಮಾಡಿದರೂ ಸರಿಯಾದ ಫಲಿತಾಂಶ ದೊರೆಯುತ್ತಿಲ್ಲ ಎನಿಸಿದಾಗ ನಾವು ಹಿಡಿದ ಹಾದಿ ನಮ್ಮನ್ನು ನಮ್ಮ ಗುರಿಯೆಡೆಗೆ ನಡೆಸುತ್ತದೆಯೇ ಎಂಬುದನ್ನು ಒಂದು ಬಾರಿ ಅವಲೋಕಿಸಿಕೊಳ್ಳಬೇಕು. ಗುರಿ ಸ್ಪಷ್ಟವಿದ್ದಾಗಲೇ ಗುರಿ ಸಾಧಿಸುವ ಹಾದಿ ಸಿಗುವುದು ಸುಗಮವಾಗುತ್ತದೆ.
ಎಲ್ಲರ ಬದುಕಿನಲ್ಲೂ ಒಂದೇ ಬಗೆಯ ಘಟನೆಗಳು ನಡೆಯುತ್ತವೆ. ಆದರೆ ನಾವು ಅದಕ್ಕೆ ನೀಡುವ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ. ಅದು ಘಟನೆಯ ಪರಿಣಾಮವನ್ನು ನಿರ್ಧರಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರನ್ನು ರೈಲು ಗಾಡಿಯಿಂದ ಹೊರದಬ್ಬಿದಾಗ ಅವರು ಆ ಘಟನೆಗೆ ಪ್ರತಿಕ್ರಿಯಿಸಿದ ರೀತಿಯಿಂದಲೇ ಆ ಘಟನೆ ಚರಿತಾರ್ಥವಾಯಿತು. ವರ್ಣವಿಬೇಧ ನೀತಿಯ ವಿರುದ್ಧದ ಹೋರಾಟಕ್ಕೆ ನಾಂದಿಯಾಯಿತು.
ಪ್ರತಿಯೊಬ್ಬರ ಜೀವನದಲ್ಲಿ ನಡೆಯ ಬಹುದಾದ ಅತಿ ಸಾಮಾನ್ಯ ಘಟನೆ, ಗಾಂಧೀಜಿಯವರು ಪ್ರತಿಕ್ರಿಯಿಸಿದ ರೀತಿಯಿಂದಾಗಿ ಚರಿತಾರ್ಥವಾಯಿತು.
picture source internet: wallpapermania.freehostia.com/windows.html

No comments:

Post a Comment

 
Designed by Lena