ಗ್ರಹಣ ಇಷ್ಟು ಅಂದವಾಗಿರಬಹುದೆಂದು ಅಂದುಕೊಂಡೇ ಇರಲಿಲ್ಲ. ಶತಮಾನದ ಸುದೀರ್ಘ ಗ್ರಹಣ ಎಂದೇ ಎಲ್ಲರ ಗಮನ ಸೆಳೆದಿದ್ದ ಇದರ ಬಗ್ಗೆ ಅನೇಕರಿಗೆ ಆತಂಕ, ಬಹುತೇಕರಿಗೆ ಕುತೂಹಲ. ಗ್ರಹಣ ನೋಡ ಹೊರಟವರಿಗೆ ಎದುರಾದದ್ದು ಖಾಲಿ ಖಾಲಿ ರಸ್ತೆ, ಮುಚ್ಚಿದ ಅಂಗಡಿ ಮುಂಗಟ್ಟುಗಳು, ಅರ್ಧಬಾಗಿಲು ತೆರೆದಿದ್ದ ಹೊಟೇಲುಗಳು.
ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆಗಾಗಿ ಅನುಕೂಲ ಮಾಡಿಕೊಟ್ಟಿದ್ದ ಬಾಹ್ಯಾಕಾಶ ವೀಕ್ಷಣಾ ಸಂಸ್ಥೆಯನ್ನ ತಲುಪಿದ್ದೇ ತಡ ಮತ್ತೊಂದು ಮಾಯಾಲೋಕವೇ ತೆರೆದುಕೊಂಡಿತ್ತು.
ಗ್ರಹಣವನ್ನು ನೋಡಲು ಎರಡು ಮೂರು ವರ್ಷದ ಮಕ್ಕಳನ್ನೂ ಕರೆತಂದಿದ್ದ ತಾಯಂದಿರಿಂದ ಹಿಡಿದು, ಎಂಭತ್ತರ ಹರೆಯದವರವರೆಗಿನ ಎಲ್ಲ ವಯೋಮಾನದವರೂ ಈ ಕೌತುಕ ನೋಡಲು ನೆರೆದಿದ್ದರು.
ಗ್ರಹಣ ನೋಡಲು ಅವರಿವರಿಂದ ಚಾಳೀಸು ಪಡೆದು ನೋಡಿದ್ದಾಯ್ತು. ಹಾಗೆಯೇ ಎಲ್ಲರಿಗೂ ಬರಿಗಣ್ಣಿನಲ್ಲಿ ನೋಡಲು ಸಾಧ್ಯವಾಗುವಂತೆ ಗ್ರಹಣದ ಪ್ರತಿಫಲನದ ವ್ಯವಸ್ಥೆ ಮಾಡಿದ್ದರು ಸಂಸ್ಥೆಯವರು ಅದನ್ನೂ ನಿರುಕಿಸಿದ್ದಾಯ್ತು. ಇಷ್ಟಕ್ಕೇ ಸಂಭ್ರಮಿಸುತ್ತಿದ್ದ ನಮಗೆ ಪಕ್ಕದಲ್ಲಿದ್ದ ಹಲವರು ಬೋರ್ಡ್ ಒಂದರ ಮೇಲೆ ಬಿಳಿ ಕಾಗದ ಹಿಡಿದು ಏನನ್ನೋ ನೋಡುತ್ತಿದ್ದುದು ಕಾಣಿಸಿತು. ಹತ್ತಿರ ಹೋಗಿ ನೋಡಿದರೆ ಅಲ್ಲಿಯೂ ಹಾಳೆಯ ಮೇಲೆ ಸೂಜಿ ಮೊನೆಯಿಂದ ಹಾಕಲಾಗಿದ್ದ ಪುಟ್ಟ ತೂತಿನಿಂದ ಹಾದು ಬಂದ ಕಿರಣವೊಂದು ಸೂರ್ಯನ ಗ್ರಹಣದ ಬಿಂಬವನ್ನು ಹೊತ್ತು ತಂದಿತ್ತು.
ಅಲ್ಲಿಗೆ ಬಂದ ಸ್ವಯಂ ಸೇವಕಿ ನೀವೀಗ ಮಾಡುತ್ತಿರುವ ಪ್ರಯೋಗವನ್ನು ಪ್ರಕೃತಿಯೇ ಮಾಡಿದೆ ಬಂದು ನೋಡಿ ಎಂದದ್ದೇ ಅವಳ ಹಿಂದೆ ಹೊರಟೆವು. ಅಲ್ಲಿ ಹೋದಾಗ ಕಂಡದ್ದು ಮಾತ್ರ ಪ್ರಕೃತಿಯ ಕೌತುಕ. ಮರದ ದಟ್ಟ ನೆರಳನ್ನು ಸೀಳಿಕೊಂಡು ಬಂದ ಪ್ರತಿ ಕಿರಣವೂ ಗ್ರಹಣಗ್ರಸ್ತ ಸೂರ‍್ಯನ ಬಿಂಬವನ್ನು ಮೂಡಿಸಿತ್ತು. ವಾಹ್ ಅದೊಂದು ಅದ್ಭುತ ನೋಟ.

ಅಲ್ಲಿಂದ ತಿರುಗಿ ಹೊರಟಾಗ ದಾರಿಯುದ್ದಕ್ಕೂ ಇದ್ದ ಮರದ ನೆರಳನ್ನು ಸೀಳಿಕೊಂಡು ಬಂದ ಕಿರಣಗಳು ಗ್ರಹಣಗ್ರಸ್ತ ಸೂರ‍್ಯನ ಬಿಂಬವನ್ನು ಮೂಡಿಸಿದ್ದವು.
ಇಂತಹ ಸುಂದರ ನೋಟವನ್ನು ನೋಡುವ ಅವಕಾಶವನ್ನು ಕಳೆದು ಕೊಂಡು ಮನೆಯಲ್ಲಿ ಅಡಗಿ ಕುಳಿತಿರುವಿರಲ್ಲಾ ಎಂದು ಎಲ್ಲರನ್ನೂ ನೋಡಿ ನಗುತ್ತಿರುವಂತೆ ಭಾಸವಾಗುತ್ತಿತ್ತು.
ಸಖತ್ತಾಗಿದೆ. ದಿನಾಂಕ ಹಾಕಿದ್ರೆ ಇನ್ನೂ ಚೆನ್ನಾಗಿರತಿತ್ತು....
ReplyDeleteHere comes the person who didnt get to experience it.I am glad I get to read it though!
ReplyDelete