Sunday, October 10, 2010


ರೇಡಿಯೋ ಬೇಟೆಯಲ್ಲಿ...

ಅದು ನನ್ನ ಮೊದಲ ಸಂಬಳ ನನಗೋ ಎಲ್ಲರಿಗೂ ಏನನ್ನಾದರೂ ತರಬೇಕೆನ್ನುವ ತವಕ. ಮನೆಗೆ ಬಂದವಳೇ ಎಲ್ಲರನ್ನೂ ಕೇಳಿದೆ ಏನು ಬೇಕು ಎಲ್ಲರೂ ತಮಗೆ ತೋಚಿದ್ದು ಹೇಳಿದರು. ಅಮ್ಮ ಮಾತ್ರ ಸುಮ್ಮನಿದ್ದಳು. ಅಮ್ಮಾ ಹೇಳು ನಿನಗೇನು ಬೇಕು ಎಂದೆ ಹಲವಾರು ಬಾರಿ ಕೇಳಿದರೂ ಏನೂ ಉತ್ತರವೇ ಕೊಡಲಿಲ್ಲ. ತೀರಾ ಒತ್ತಾಯಿಸಿದಾಗ ಬಾಯಿಬಿಟ್ಟಳು ಇಲ್ಲಾ ನನಗೊಂದು ರೇಡಿಯೋ ಬೇಕು. ಅರೆ ಇದೆಂತಹ ವಿಚಿತ್ರ ಬೇಡಿಕೆ ಎನ್ನಿಸಿಬಿಟ್ಟಿತು. ಅಲ್ಲಮ್ಮಾ ನಿನ್ನ ಮೊಬೈಲ್‌ನಲ್ಲೇ ರೇಡಿಯೋ ಬರುತ್ತದಲ್ಲ, ಇಲ್ಲಾ ಅಂದರೆ ಮ್ಯೂಸಿಕ್‌ ಸಿಸ್ಟಂನಲ್ಲಿಯೂ ರೇಡಿಯೋ ಬರುತ್ತದಲ್ಲ ಅದನ್ನೇ ಕೇಳು ಬೇಕಿದ್ದರೆ ನಿನ್ನ ರೂಮಿಗೇ ಟಿವಿ ತರೋಣ ಎಂದೆ. ಊಹೂಂ ಬೇಡವೇ ಬೇಡ ಏನಾದರೂ ಕೊಡಿಸುವ ಮನಸ್ಸಿದ್ದರೆ ನನಗೆ ರೇಡಿಯೋ ಮಾತ್ರವೇ ಬೇಕು ಎಂದು ಸುಮ್ಮನಾಗಿ ಬಿಟ್ಟಳು. ಸರಿ ಕೇಳುತ್ತಿರುವುದೇನು ಮಹಾ ರೇಡಿಯೋ ತಾನೆ ತಂದರಾಯ್ತು ಎಂದು ಸರಿಬಿಡು ಎಂದು ಒಪ್ಪಿಕೊಂಡುಬಿಟ್ಟೆ. ಸರಿ ಒಬ್ಬಳೆ ಹೋಗುವುದೇನು ಅಮ್ಮನನ್ನೂ ಕರೆದುಕೊಂಡು ಹೋದರಾಯ್ತು ಆಕೆಗಿಷ್ಟವಾದದ್ದನ್ನೇ ಆರಿಸಿಕೊಳ್ಳಲಿ ಎಂದುಕೊಂಡೆ. ಇಬ್ಬರೂ ಹೊರಟೆವು. ರೇಡಿಯೋತಾನೆ ಇಲ್ಲೇ ಎಲ್ಲಾದರೂ ಸಿಗುತ್ತದೆ ಎಂದುಕೊಂಡೆ. ಮೊದಲ ಅಂಗಡಿಯಲ್ಲಿ ಕೇಳಿದರೆ ಇಲ್ಲಿ ಇಲ್ಲ ಎಂದು ಹೇಳಿಬಿಟ್ಟರು. ಒಂದೊಂದೇ ಅಂಗಡಿ ಕೇಳಿದಾಗಲೂ ಉತ್ತರ ಮಾತ್ರ ನಕಾರವೇ. ಟಿವಿ ಯುಗದಲ್ಲಿ ರೇಡಿಯೋ ಕೇಳುವ ನಮ್ಮನ್ನು ಮ್ಯೂಸಿಯಂನಲ್ಲಿನ ವಸ್ತುಗಳಂತೆ ವಿಚಿತ್ರವಾಗಿ ದಿಟ್ಟಿಸಿ ನೋಡುತ್ತಿದ್ದರು. ನಮ್ಮಲ್ಲಿರುವ ಎಲ್ಲ ಬಗೆಯ ಎಲೆಕ್ಟ್ರಾನಿಕ್‌ ವಸ್ತುಗಳನ್ನ ಮಾರುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದ ಅಂಗಡಿಗೆ ಕಾಲಿಟ್ಟೆ. ಎಲ್ಲೆಲ್ಲೂ ದೊಡ್ಡ ದೊಡ್ಡ ಟಿವಿಗಳು ವಾಷಿಂಗ್‌ ಮಷೀನ್‌ಗಳು ಹೀಗೆ ತುಂಬಿ ತುಳುಕಾಡುತ್ತಿದ್ದವು ನನಗೆ ತುಂಬಾ ಖುಷಿಯಾಯ್ತು ಇಲ್ಲಿ ಖಂಡಿತ ರೇಡಿಯೋ ಸಿಕ್ಕೇ ಸಿಗುತ್ತದೆ ಎಂದು ಖಾತರಿಯಾಯ್ತು. ತುಂಬ ಸೊಫಿಸ್ಟಿಕೇಟೆಡ್‌ ಆಗಿದ್ದ ಯವಕನೊಬ್ಬ ಕ್ಲೋಸಪ್‌ ನಗೆಯೊಗೆದು ನಿಮಗೆ ಸಹಾಯ ಮಾಡಲೇ. ನೀವು ಇಂತಹ ಬ್ರಾಂಡ್‌ ಬೇಕು ಎಂದು ಹೇಳಿ ನಮ್ಮ ಮಳಿಗೆಯಲ್ಲಿದೆ. ನೀವು ಏನೇ ಕೇಳಿದರೂ ನಮ್ಮಲ್ಲಿದ್ದಿದ್ದರೆ ಬೇರೆ ಕಡೆಯಿಂದ ತರಿಸಿಕೊಡುತ್ತೇವೆ ಎಂದು ಕೇಳಿದ. ನನಗೆ ರೇಡಿಯೋ ಬೇಕು ಎಂದು ಮೆಲ್ಲನೆ ಉಸುರಿದೆ. ಅನ್ಯಗ್ರಹದ ಪ್ರಾಣಿ ಯಾವುದೇ ಅಪ್ಪಿತಪ್ಪಿ ಇಲ್ಲಿಗೆ ಬಂದುಬಿಟ್ಟಿದೆಯೇನೋ ಎಂಬಂತೆ ದಿಟ್ಟಿಸಿ ನೋಡಿದ. ಬಹಳ ಬಲವಂತದಿಂದ ನಗೆ ತಡೆದುಕೊಂಡ. ಸೌಜನ್ಯಕ್ಕಾಗಿ ನಾನು ನಮ್ಮ ಮೇಲಧಿಕಾರಿಯನ್ನು ಕೇಳಿಕೊಂಡು ಬರುತ್ತೇನೆ ಎಂದವನೇ ಹೋಗಿ ಅವರಿಗೆ ಹೇಳಿದ. ಇಬ್ಬರೂ ಕಿಸಕ್ಕನೆ ನಕ್ಕದ್ದು ಕೇಳಿತು. ಸರಿ ಇನ್ನಲ್ಲಿ ನಿಲ್ಲಲಾಗಲಿಲ್ಲ. ಹೊರಟು ಬಂದೆವು. ನಮ್ಮ ಬೆನ್ನಹಿಂದೆ ಅವರು ಘೊಳ್ಳನೆ ನಕ್ಕಿದ್ದು ಕಿವಿಗಪ್ಪಳಿಸಿತು. ಅಮ್ಮನ ಮುಖ ಚಿಕ್ಕದಾಗಿತ್ತು. ಅದು ಸಿಕ್ಕುವುದೇ ಇಲ್ಲವೇನೋ ಎಂಬ ಆತಂಕ ಅಮ್ಮನಿಗೆ ಕಾಡುತ್ತಿತ್ತು. ಆದರೂ ಹೋಗಲಿ ಬಿಡೆ ಎಷ್ಟಂತ ಹುಡುಕುವುದು ಇಲ್ಲದಿದ್ದರೆ ಇಲ್ಲ ಎಂದೇನೋ ಹೇಳಿದಳು ಆದರೆ ಆ ಮಾತಿನಲ್ಲಿ ಜೀವವಿರಲಿಲ್ಲ. ಮೆಟ್ಟಿಲಿಳಿದು ಸ್ವಲ್ಪದೂರ ನಡೆದಾಗ ಎದುರಿಗೊಂದು ಆಟೋ ಸಿಕ್ಕಿತು ಚಾಲಕ ಸ್ವಲ್ಪ ಊರು ತಿಳಿದವನಂತೆ, ಒಳ್ಳೆಯವನಂತೆ ಕಂಡ ಎಲ್ಲಿಗೆ ಹೋಗಬೇಕು ಎಂದದ್ದಕ್ಕೆ ಇಲ್ಲಾ ಯಾವುದಾದರೂ ರೇಡಿಯೋ ಸಿಕ್ಕುವ ಅಂಗಡಿಗೆ ಕರೆದುಕೊಂಡು ಹೋಗಪ್ಪ ಎಂದೆ. ಅದಕ್ಕವನು ಹಿಂತಿರುಗಿ ನೋಡಿದ ಓ ಪಾಕೆಟ್‌ ರೇಡಿಯೋನಾ ಎಲ್ಲೆಂದರಲ್ಲಿ ಅದು ಸಿಕ್ತದೆ ಬಿಡಿ. ರೋಡಲ್ಲೂ ಸಿಗುತ್ತಲ್ಲ ಎಂದ. ಆಶ್ಚರ್ಯವಾಯ್ತು ಅರೆ ನಮಗೆ ಗೊತ್ತಾಗಲೇ ಇಲ್ಲವಲ್ಲ ಅಂದುಕೊಳ್ಳುತ್ತಿದ್ದಂತೆ, ನೋಡಿ ನಾನು ಟ್ರಾಫಿಕ್ನಾಗೆ ತಕಂಡಿದ್ದು ಆರ‍್ತಿಂಗ್ಳಾಯ್ತು ಈಗ್ಲೂ ಹಾಳಾಗಿಲ್ಲ ನಮ್ಮಂತೋರ‍್ಗೆ ಒಳ್ಳೆ ಟೈಂಪಾಸ್‌ ಎಂದ. ಇಲ್ಲಪ್ಪಾ ನಮಗೆ ಎಫ್‌ಎಂ ಬೇಡಾ ಸೀದಾಸಾದ ರೇಡಿಯೋ ಬೇಕು ಎಂದದ್ದಕ್ಕೆ ಯಾವುದೋ ಕಾಲದ ಪಳಯುಳಿಕಗೆಗಳನ್ನ ನೋಡುತ್ತಿರುವಂತೆ ನೋಡಿ ಇನ್ನೂ ರೇಡಿಯೋ ಬರ‍್ತೈತಾ. ಈ ಟಿವಿ ಜಮಾನದಾಗೆ ರೇಡಿಯೋ ಕೇಳೋವ್ರು ಇದಾರ ಎಂದ. ಸರಿಯಪ್ಪ ಎಲ್ಲಾದ್ರೂ ಇರೋ ಕಡೆ ಕರ‍್ಕೊಂಡು ಹೋಗು ಎಂದದ್ದಕ್ಕೆ ಇಲ್ಲೊಂದು ಕಾಂಪ್ಲೆಕ್ಸ್‌ ಇದೆ ಆ ಅಂಗಡಿಯಲ್ಲಿ ಕೇಳಿ ಸಿಗಬಹುದು ಎಂದ ಸರಿ ಮತ್ತ ಅಲ್ಲಿಗೆ ಹೊರಟಿತು ನಮ್ಮ ಸವಾರಿ. ಇಷ್ಟು ಹೊತ್ತಿಗೆ ಟ್ರಷರ‍‌ ಹಂಟ್‌ನ ರೂಪ ತಳೆದಿತ್ತು ನಮ್ಮ ರೇಡಿಯೋ ಕೊಳ್ಳುವ ಕೆಲಸ. ಒಂದು ಅಂಗಡಿಯಿಂದ ಮತ್ತೊಂದಕ್ಕೆ, ಒಂದು ರಸ್ತೆಯಿಂದ ಮತ್ತೊಂದಕ್ಕೆ ಆ ಅಂಗಡಿಯವರು ಹೇಳಿದ ಮತ್ತೊಂದು ಏರಿಯಾದ ಕಡೆಗೆ ಹೀಗೆ ಹೊರಟಿದ್ದೆವು ಇಷ್ಟರಲ್ಲಿ ಮಧ್ಯದಲ್ಲೊಂದು ದೇವಸ್ಥಾನ ಸಿಕ್ಕಿತು. ಅಮ್ಮ ನಡಿ ಅಲ್ಲಿಗೆ ಹೋಗೋಣ ಎಂದಳು ರೇಡಿಯೋ ಸಿಗದಿದ್ದರೆ ಬೇಡ ಅಮ್ಮನಿಗೊಂದಿಷ್ಟು ಸಮಾಧಾನವಾದರೂ ಆಗಲಿ ಎಂದು ಅಲ್ಲಿಗೆ ಹೋದೆವು. ಅಷ್ಟು ಹೊತ್ತಿಗೆ ಇಬ್ಬರಿಗೂ ಸಾಕಾಗಿತ್ತು. ನನಗೋ ರೇಡಿಯೋ ರೇಜಿಗೆ ತರಿಸಿ ಬಿಟ್ಟಿತ್ತು. ಅಮ್ಮ ಮನೆಗೆ ಹೋಗೋಣವಾ ಹೂಂ ಎಂದೇನೋ ಹೇಳಿದಳು. ಎಂದೂ ಕೇಳದವಳು ಬಾಯಿಬಿಟ್ಟು ಕೇಳಿದ್ದನ್ನು ಕೊಡಿಸಲಾಗುತ್ತಿಲ್ಲವಲ್ಲ ಎನ್ನಿಸಿ ಸರಿ ಇನ್ನೊಂದರಡು ಅಂಗಡಿ ನೋಡಿಬಿಡೋಣ ಸಿಗದಿದ್ದರೆ ಮನೆಗೆ ಹೊರಟು ಬಿಡೋಣ ಎಂದುಕೊಂಡೆವು. ಮತ್ತೆ ಸಾಲಿನಲ್ಲಿನ ಒಂದೆರಡು ಅಂಗಡಿಗೆ ಹೋದರೆ ಅವರು ನಮ್ಮಲ್ಲಿ ಇಲ್ಲ ಇಂತಹ ವಸ್ತುಗಳೆಲ್ಲ ಇದೇ ಸಾಲಿನ ಕೊನೆಯಲ್ಲಿರುವ ಮಾರುತಿ ಸ್ಟೋರ‍್ಸ್‌ನಲ್ಲಿ ಖಂಡಿತ ಸಿಗುತ್ತವೆ ಎಂದರು. ನಿಜವಾಗಿಯೂ ಸಿಗುತ್ತದಾ ಎಂದು ಎರೆಡೆರಡುಬಾರಿ ಕೇಳಿ ಖಚಿತಪಡಿಸಿಕೊಂಡೆವು. ನಂತರ ಅಲ್ಲಿಗೆ ಹೊರಟೆವು ನಮ್ಮ ನಡಿಗೆಯೂ ನಿಧಾನವಾಗಿತ್ತು. ಹೊರಗಿನಿಂದ ನೋಡಲು ಅದೊಂದು ತಡಿಕೆ ಅಂಗಡಿಯಂತಿತ್ತು. ಸುತ್ತಮುತ್ತ ಎರಡಿಂಚು ಧೂಳು. ತಡಿಕೆ ಒಳ ಪ್ರವೇಶಿಸಿದರೆ ಸಣ್ಣ ಅಂಗಡಿ. ಯಜವಾನ ಮತ್ಯಾರದೋ ಜತೆ ಹರಟೆಯಲ್ಲಿ ನಿರತನಾಗಿದ್ದ. ನಿಮ್ಮ ಬಳಿ ರೇಡಿಯೋ ಇದೆಯೋ ಒಂದೇ ಉಸುರಿನಲ್ಲಿ ಕೇಳಿದೆವು. ಅದಕ್ಕೆ ಅವನು ಸಾವಕಾಶವಾಗಿ ಇದೆ ಎಂದ. ಆಮೇಲೆ ಮೈಮುರಿದು ಆಕಳಿಸಿ ಚಿಟಿಕೆಹಾಕಿ ನಿಧಾನವಾಗಿ ಎದ್ದು ಇದೋ ಇಲ್ಲಿದೆ ತೋರಿಸಿದ. ಅದನ್ನು ನೋಡಿದ್ದೇ ನಮ್ಮ ಉತ್ಸಾ ಹ ಬತ್ತಿ ಹೋಯ್ತು. ಒಂದು ಕ್ಷಣ ಅಯ್ಯೋ ಈ ಎಫ್‌ಎಂ ರೇಡಿಯೋ ಕೊಳ್ಳಲಾ ನಾವಿಷ್ಟೆಲ್ಲಾ ಸುತ್ತಿದ್ದು ಎನ್ನಿಸಿಬಿಟ್ಟಿತು. ಅಮ್ಮನನ್ನಂತೂ ನೋಡಲೇ ಆಗಲಿಲ್ಲ . ಮಗುವಿಗೆ ಚಾಕೊಲೇಟ್‌ನ ಆಸೆ ತೋರಿಸಿ ಕಿತ್ತುಕೊಂಡಂತಾಗಿತ್ತು ನಮ್ಮ ಸ್ಥಿತಿ. ಅಯ್ಯೋ ಇದಲ್ಲಾ ಬಿಡಿ ನಮಗೆ ಬೇಕಾದದ್ದು ಎಂದು ಹಿಂತಿರುಗಿದೆವು. ಆಗ ಮಾಲಿಕ ಕೇಳಿದ ನಿಮಗ್ಯಾವುದು ಬೇಕು ಎಂದ, ಆಕಾಶವಾಣಿ ಕೇಳಲು ಬೇಕಿತ್ತು ಎಷ್ಟು ಬ್ಯಾಂಡ್‌ನ ರೇಡಿಯೋ ಬೇಕಿತ್ತು ಎಂದು ಆತ ಕೇಳಿದ ಮೇಲೆಯೂ ನಮಗೆ ನಂಬಿಕೆ ಬರಲಿಲ್ಲ. ನೋಡಿಮ್ಮಾ ಇದು ಹನ್ನೆರಡು ಬ್ಯಾಂಡ್‌ನ ಸೆಟ್ ಇದ್ರಲ್ಲಿ ಬಿಬಿಸಿಯನ್ನೂ ಕೇಳಬಹುದು ಫಾರಿನ್‌ ಸ್ಟೇ಼ಷನ್‌ಗಳೆಲ್ಲವೂ ಬರತ್ತೆ, ಇದೋ ಇಲ್ಲಿ ನೋಡಿ ಇದು ಎಂಟು ಬ್ಯಾಂಡ್‌ನ ಸೆಟ್‌ ತುಂಬಾ ಚೆನ್ನಾಗಿದೆ ಸೌಂಡ್‌ಗೆ ಲೌಡ್‌ಸ್ಪೀಕರ್‌ ಬೇಡವೇ ಬೇಡಾ. ಸೆಟ್‌ ನೋಡಿ ಚೆನ್ನಾಗಿದೆ ಜಪಾನ್‌ ಸೆಟ್‌ ಎಂದು ತೋರಿಸಿದ. ನನಗೋ ಅನುಮಾನ ಇವನೆಲ್ಲೋ ನಮ್ಮನ್ನು ಯಾಮಾರಿಸುತ್ತಿದ್ದಾನಾ ಎಂದು. ಎಷ್ಟಪ್ಪಾ ಎಂದದ್ದಕ್ಕೆ ಆರುನೂರೈವತ್ತು ಮೇಡಂ ಎಂದ. ತುಂಬಾ ಜಾಸ್ತಿಯಾಯ್ತು ಎಂದೆ. ನಮ್ಮ ಜಮಾನದ್ದು ಮೇಡಂ ಒಂದು ಕಾಲ್ದಲ್ಲಿ ಎಮತ ಯಾಪಾರ ಮಾಡ್ದವ್ರು ಮೇಡಂ ನಾವು ಇಡೀ ಬೆಂಗಳೂರಿಗೆ ರೇಡಿಯೋಗಳನ್ನ ಸಪ್ಲೈ ಮಾಡ್ತಿದ್ವಿ. ಒಂದೊಂದು ದಿನಕ್ಕೆ ಸಾವಿರಸೆಟ್‌ ಮಾರಿದ ದಿನಗಳು ಇದ್ವು. ಈಗ ತಿಂಗಳಿಗೊಂದೂ ಹೋಗಲ್ಲ. ಬೇರೆ ಬಿಸಿನೆಸ್‌ ಇದ್ರೂ ಮೊದಲು ಇಲ್ಲೇ ಶುರುಮಾಡಿದ್ದು ಮುಚ್ಚೋಕೆ ಇಷ್ಟ ಇಲ್ದೆ ಇಟ್ಕೊಡಿದೀವಿ ಅಷ್ಟೆ. ಎಷ್ಟೋ ಸಾರಿ ನಮ್ಮ ಕಾಲ್ದಲ್ಲಿ ಶ್ರೀಲಂಕಾ ಸ್ಟೇಷನ್‌ನಲ್ಲಿ ಮೀನಾಕ್ಷಿ ಪುನ್ನುದೊರೈ ಧ್ವನಿ ಕೇಳೋದಕ್ಕೇನೆ ರೋಡಿಯೋ ತಗೊಂಡವರನ್ನೂ ನೋಡಿದಿವೀ. ಇದೆಲ್ಲಾ ನಮ್ಮ ಜಮಾನದ್ದು ಮೇಡಂ ಈಗ ಯಾರು ಕೇಳ್ತಾರೆ ಪ್ರವರವನ್ನೇ ಬಿಗಿದು ಬಿಟ್ಟ. ಹಾಗೂಹೀಗೂ ಚೌಕಾಸಿ ಮಾಡಿ ಐನೂರಕ್ಕಿಳಿಸಿದೆವು. ಅಮ್ಮನಿಗೇನೋ ನಿಧಿ ಸಿಕ್ಕಂತಾಗಿತ್ತು. ಅದನ್ನು ಜತನದಿಂದ ಕೈಗೆತ್ತಿಕೊಂಡು ಹುಷಾರಾಗಿ ಹಿಡಿದು ಕೊಂಡಳು. ಮನೆಗೆ ಬಂದವಳೇ ಮಕ್ಕಳಿಗೆ ಸಿಗದ ಮೇಲಿನ ಕಪಾಟಿನಲ್ಲಿ ಅದನ್ನಿಟ್ಟಳು. ಅದನ್ನುಯಾರೂ ಮುಟ್ಟಬಾರದೆಂದು ಎಲ್ಲರಿಗೂ ತಾಕೀತು ಮಾಡಿದಳು. ನಿಧಾನವಾಗಿ ರೇಡಿಯೋ ಟ್ಯೂನ್‌ ಮಾಡಿದಾಗ ಗೊರ್‌ ಸದ್ದು ಶುರುವಾಯ್ತು. ಅಮ್ಮನಿಗೆ ಎಲ್ಲಿಲ್ಲದ ಸಂಭ್ರಮ ಅಂತೂ ಇಂತೂ ಆಕಾಶವಾಣಿ ಬೆಂಗಳೂರು ಎಂಬ ಧ್ವನಿ ಮನೆಯಲ್ಲಿ ಮೊಳಗಿದಾಗ ಯುದ್ಧಗೆದ್ದ ಸಂಭ್ರಮ ನಮ್ಮದಾಗಿತ್ತು .

Wednesday, June 9, 2010

ಅರಳುವ ಮುನ್ನ ಮುರುಟುವ ಬಾಲ್ಯಗಳು

ಹಸೆಯ ಮೇಲೆ ಹದಿನಾಲ್ಕರ ಹರೆಯದ ಹೆಣ್ಣು ೩೭ರ ಗಂಡು. ಇನ್ನೂ ತನ್ನ ಹದಿಹರೆಯದ ಭಾವನೆಗಳನ್ನೇ ಅರ್ಥ ಮಾಡಿಕೊಳ್ಳಲು ಹೆಣಗುವ ಬಾಲೆಗೆ ಮದುವೆ.
ದುಡಿಯಲು ದೇಹದಲ್ಲಿ ಶಕ್ತಿಯೇ ಇಲ್ಲ. ಆದರೂ ಬದುಕಲೇ ಬೇಕಲ್ಲ. ಹಾಗಾಗಿ ತುತ್ತಿನ ಚೀಲ ತುಂಬಿಸಲು ಮಗನನ್ನು ಶಾಲೆ ಬಿಡಿಸಿ ಕೆಲಸಕ್ಕೆ ಹಚ್ಚಿದ ತಂದೆ.
ಅಪ್ಪನಿಲ್ಲ ಅಮ್ಮನೂ ಇಲ್ಲ. ಪುಟ್ಟ ಹೆಗಲಿಗೆ ತಮ್ಮ ತಂಗಿಯರ ಬದುಕು ಕಟ್ಟುವ ಜವಾಬ್ದಾರಿ. ಬೆಳಗಿನ ಹೊತ್ತು ಓದು ಸಂಜೆ ಕೆಲಸ. ಜತೆಯಾಗಿದ್ದು, ಪುಟ್ಟ ಕೈಗಳಿಗೆ ಕಸವು ತುಂಬಿದ್ದು ತಮ್ಮ ತಂಗಿಯರನ್ನು ಚೆನ್ನಾಗಿ ಓದಿಸಿ ಸಮಾಜದಲ್ಲಿ ಗೌರವಾನ್ವಿತರನ್ನಾಗಿ ಮಾಡಬೇಕೆನ್ನುವ ಕನಸು.
ಮೇಲಿನ ಎಲ್ಲ ಚಿತ್ರಣಗಳಲ್ಲೂ ಒಂದು ಅಂಶವಂತೂ ಸಾಮಾನ್ಯ. ಇಲ್ಲಿ ಪರಿಸ್ಥಿಯ ಕೈಗೊಂಬೆಯಾಗಿರುವವರೆಲ್ಲ ಮಕ್ಕಳೇ. ಅಷ್ಟೇಅಲ್ಲ ಈ ಮಕ್ಕಳೆಲ್ಲ ಒಂದೋ ಎಚ್‌ಐವಿ ಮತ್ತು ಏಡ್ಸ್ ನಿಂದಾಗಿ ತಂದೆ ತಾಯಿರನ್ನು ಕಳೆದು ಕೊಂಡವರು ಇಲ್ಲವೇ ತಂದೆ ತಾಯಿಯರಿಂದ ಸೋಂಕನ್ನು ಪಡೆದವರು.
ಈ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಮೊಗೆದಷ್ಟೂ ಮುಗಿಯದ ಅಡಚಣೆಗಳು. ಆಡುವ, ಓಡುವ, ಓದುವ ಉತ್ಸಾಹಕ್ಕೆ ಒದಗದ, ಅಡಿಗಡಿಗೆ ಕೈಕೊಡುವ ಆರೋಗ್ಯ, ಪೌಷ್ಠಿಕ ಆಹಾರವನ್ನು ನೀಡಲಾಗದ ಬಡತನ, ಸಮಾಜದ ಮುಖ್ಯವಾಹಿನಿಗೆ ಬರಲಾಗದ ಸಮಾಜದ ಕಳಂಕ ತಾರತಮ್ಯಗಳಿಂದ ಬಡವಾಗಿರುವ ಈ ಕಂದಮ್ಮಗಳ ಬದುಕನ್ನು ಹತ್ತಿರದಿಂದ ನೋಡಿದವರ ಕಣ್ಣು ಮಂಜಾಗುವಂತೆ ಮಾಡುತ್ತದೆ.
“ಕೆಲವು ದಿನಗಳ ಹಿಂದಷ್ಟೇ ನನಗೆ ಅಮ್ಮನ ಪಾಸಿಟಿವ್‌ ಸ್ಥಿತಿಯ ಬಗ್ಗೆ ಗೊತ್ತಾಯ್ತು. ಈಗಲೂ ನನಗೆ ಅದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಅಪ್ಪ ಸ್ವಲ್ಪ ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ಈಡಾಗಿ ತೀರಿಕೊಂಡರು. ಆಗಲೇ ವೈದ್ಯರು ಅಮ್ಮನಿಗೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಹೇಳಿದ್ದು. ಅಪ್ಪನನ್ನು ಕಳೆದುಕೊಂಡಿದ್ದು ಒಂದು ಆಘಾತವಾದರೆ ಈಗ ಅಮ್ಮನ ಸ್ಥಿತಿ ತಿಳಿದ್ದದ್ದು ಇನ್ನೊಂದು. ಅಪ್ಪ ಸತ್ತಿದ್ದು, ಅಮ್ಮನಿಗೆ ಎಚ್‌ಐವಿ ಸೋಂಕಿರುವುದು ಗೊತ್ತಾಗಿ ನಮ್ಮ ಬಂಧುಗಳೆಲ್ಲ ನಮ್ಮಿಂದ ದೂರವಾಗಿದ್ದಾರೆ.’ ಎನ್ನುತ್ತಾಳೆ ಗೌರಿ (ಹೆಸರುಗಳನ್ನು ಬದಲಿಸಲಾಗಿದೆ).
ಮೊದಲೇ ಹದಿಹರೆಯ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಸಂಕ್ರಮಣ ಕಾಲ. ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ಗಮನಿಸುವ ಗೊಂದಲಗಳನ್ನು ನಿಭಾಯಿಸಲು ಹೆಣಗುವ ಕಾಲ. ಮಾದರಿಗಳಿಗಾಗಿ ಹುಡುಕುವ, ವ್ಯಕ್ತಿತ್ವ ಮೌಲ್ದ್‌ ಆಗುವುದು ಈಗಲೇ. ಇಷ್ಟೆಲ್ಲಾ ಸಮಸ್ಯೆಗಳೊಂದಿಗೆ ಹೆಣಗುವ ಮಕ್ಕಳು ಎಚ್‌ಐವಿ ಸೋಂಕಿನಿಂದಾಗಿ ಸಮಾಜದಲ್ಲಿನ ಕಳಂಕ ಮತ್ತು ತಾರತಮ್ಯವನ್ನು ಎದುರಿಸಲು ಇನ್ನೂ ಅವರ ಮನಸ್ಸು ಸನ್ನದ್ಧವಾಗಿರುವುದಿಲ್ಲ.
ಬಾಲಕ ಪಾಲ್‌ ಹೇಳುವಂತೆ’ “ಎಚ್‌ಐವಿ ಸ್ಥಿತಿಯ ಬಗ್ಗೆ ತಿಳಿದ ಮೊದ ಮೊದಲು ಅಪ್ಪ- ಅಮ್ಮನನ್ನು ಕಂಡರೆ ವಿಪರೀತ ಸಿಟ್ಟು ಬರುತ್ತಿತ್ತು. ಅವರೊಂದಿಗೆ ಮುಖ ಕೊಟ್ಟು ಮಾತನಾಡಲೂ ಬೇಸರವಾಗುತ್ತಿತ್ತು. ವರ್ಲ್ದ್‌ ವಿಷನ್‌ ನೀಡುತ್ತಿದ್ದ ಲೈಫ್‌ ಸ್ಕಿಲ್‌ ಎಜ್ಯುಕೇಷನ್‌ ಕಾರ್ಯಕ್ರಮಗಳಿಗೆ ಹಾಜರಾದೆ. ಹಲವಾರು ತರಬೇತಿಗಳನ್ನು ಪಡೆದೆ. ಅನೇಕ ಬಾರಿ ಆಪ್ತಸಮಾಲೋಚನೆಗೆ ಬಂದೆ. ಈಗ ನಾನು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೇನೆ. ಅಪ್ಪ ಅಮ್ಮನನ್ನು ನಾನು ಪ್ರೀತಿಯಿಂದ ನೋಡಿಕೊಳ್ಳಬೇಕೆಂಬುದು ನನಗೆ ತಿಳಿದಿದೆ. ಹಾಗೆಯೇ ನಾನು ಮುಂದೆ ಓದಿ ಎಚ್‌ಐವಿ ಮತ್ತು ಏಡ್ಸ್‌ ಬಗ್ಗೆ ಅರಿವು ಮೂಡಿಸಲು, ನನ್ನಂತಹ ಮಕ್ಕಳಿಗೆ ನೆರವಾಗಲು ಬಯಸುತ್ತೇನೆ” ಎನ್ನುತ್ತಾನೆ.
“ನನ್ನ ಅಪ್ಪ ಲಾರಿ ಚಾಲಕ. ಕಳೆದ ಒಂದು ಒಂದೂವರೆ ವರ್ಷದಿಂದ ತೀರಾ ನಿಶ್ಯಕ್ತನಾಗಿದ್ದಾನೆ. ವೈದ್ಯರು ಪರೀಕ್ಷಿಸಿ ಅಪ್ಪನಿಗೆ ಎಚ್‌ಐವಿಯ ಜತೆಗೆ ಕ್ಷಯವೂ ಇದೆ ಎಂದು ಹೇಳಿದರು. ಮನೆಯಲ್ಲಿ ದುಡಿಯುವವರಿಲ್ಲ. ಅದಕ್ಕಾಗಿಯೇ ಅಪ್ಪ ನನ್ನನ್ನು ಶಾಲೆ ಬಿಡಿಸಿ ಕೆಲಸಕ್ಕೆ ಹಚ್ಚಿದ. ನನಗೆ ಓದಲು ಆಸಕ್ತಿ. ನನ್ನ ಬಗ್ಗೆ ತಿಳಿದ ವಲ್ದ್‌ð ವಿಷನ್‌ ಸಂಸ್ಥೆ, ಅಪ್ಪನ ಬಳಿ ಮಾತನಾಡಿ ನನ್ನನ್ನು ಓದಲು ಕಳುಹಿಸಲು ಒಪ್ಪಿಸಿದರು” ಎನ್ನುತ್ತಾನೆ ಕುಮಾರ್‌.
“ಅಪ್ಪ ಅಮ್ಮಂದಿರಿಗೂ ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಆಸೆಯೇನೋ ಇದೆ. ಆದರೆ ಅನೇಕ ಮನೆಗಳಲ್ಲಿ ದುಡಿಯಲು ಇಬ್ಬರಿಗೂ ಶಕ್ತಿಯಿಲ್ಲ. ನಿಶ್ಯಕ್ತಿಯಿಂದಾಗಿ ಹೆಚ್ಚಿನ ಕೆಲಸ ಮಾಡಲಾಗುವುದಿಲ್ಲ. ಅಲ್ಲಿಗೆ ಬಡತನ ಮೆಲ್ಲನೆ ನುಸುಳುತ್ತದೆ. ಮಕ್ಕಳ ಶಾಲೆಯ ಫೀಸ್‌ ಕಟ್ಟಲಾಗುವುದಿಲ್ಲ. ಮಕ್ಕಳನ್ನು ಶಾಲೆ ಬಿಡಿಸಿ ಪುಡಿಗಾಸು ದುಡಿಯಲು ಕೆಲಸಕ್ಕೆ ಹಚ್ಚುತ್ತಾರೆ.” ಎಂದು ಎನ್‌ಜಿಒ ಒಂದರಲ್ಲಿ ಸ್ವಯಂಸೇವಕಿಯಾಗಿ ದುಡಿಯುತ್ತಿರುವ ಮಮತಾ.
“ಅಪ್ಪ ಅಮ್ಮಂದಿರಿಲ್ಲದ ಎಷ್ಟೋ ಎಚ್‌ಐವಿ ಸೋಂಕಿತ ಮಕ್ಕಳು ಅವರ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿವೆ. ಆದರೆ ಅಲ್ಲಿಯೂ ಅವರ ಪರಿಸ್ಥಿತಿ ಉತ್ತಮವಾಗಿಲ್ಲ. ತೀವ್ರ ಸ್ವರೂಪದ ಕಳಂಕ ತಾರತಮ್ಯಗಳನ್ನು ಎದುರಿಸುತ್ತಿವೆ. ಇತ್ತೀಚೆಗೆ. ಹದಿನಾಲ್ಕರ ಪುಟ್ಟ ಸೋಂಕಿತ ಬಾಲಕಿಯನ್ನು ೩೭ ವರ್ಷದ ಸೋಂಕಿತ ಗಂಡಿಗೆ ಕೊಟ್ಟು ಮದುವೆ ಮಾಡುವ ಯತ್ನ ನಡೆಯಿತು. ಹೇಗೋ ವಿಷಯ ತಿಳಿದ ನಾವು ಅದನ್ನು ತಪ್ಪಿಸಿದೆವು. ಆಪ್ತ ಸಮಾಲೋಚನೆಯ ಸಮಯದಲ್ಲಿ ಅಜ್ಜಿ ಹೇಳಿದ್ದು ನಮ್ಮ ಮನಸ್ಸನ್ನು ಕಲಕಿ ಬಿಟ್ಟಿತು. ಅವಳಿಗೆ ಯಾರೂ ಇಲ್ಲ ಹೀಗಾದರೂ ಆಸರೆ ಸಿಗಲಿ ಎಂದು ಆಶಿಸುತ್ತಿದ್ದೆವು. ನೀವು ಅದಕ್ಕೂ ಕಲ್ಲು ಹಾಕಿದಿರಿ. ಹರೆಯದ ಹುಡುಗಿ, ಮೇಲಾಗಿ ಎಚ್‌ಐವಿ ಸೋಂಕು. ಎಲ್ಲಿಂದ ಗಂಡು ಹುಡುಕೋಣ. ಹೇಗೂ ಅವನಿಗೂ ಸೋಂಕಿದೆ. ಅವಳಿಗೂ ಆಸರೆಯಾಗುತ್ತಿತ್ತು ಎಂದರು.” ಎಂದು ಮಕ್ಕಳ ಆಪ್ತ ಸಮಾಲೋಚನೆ ಮಾಡುವ ವರ್ಲ್ದ್‌ ವಿಷನ್‌ನ ಕಮ್ಯುನಿಟಿ ಹೆಲ್ತ್‌ ಕೋಆರ್ಡಿನೇಟರ್ ಜಾನ್‌ ಕಾಮಾಚಿಯನ್‌.
“ಎಚ್‌ಐವಿ ಜಾತಿ, ಮತ, ವರ್ಣಬೇಧ, ರಾಷ್ಟ್ರೀಯತೆಗಳನ್ನು ಅಳಿಸಿ ಹಾಕಿದೆ. ಇದು ಕೇವಲ ಆರೋಗ್ಯಕ್ಕೆ ಸಂಬಂಧಿಸಿದ ವಿಷಯ ಮಾತ್ರವಾಗಿರದೆ. ಸಾಮಾಜಿಕ ವಿಷಯವಾಗಿ ಬೆಳೆದು ಬಿಟ್ಟಿದೆ. ದೊಡ್ಡವರು ಮಕ್ಕಳು ಇದರಿಂದ ಬಳಲುತ್ತಿದ್ದಾರೆ. ಅದರಲ್ಲೂ ಮಕ್ಕಳ ಸ್ಥಿತಿ ಗಂಭೀರವಾಗಿದೆ. ಮಕ್ಕಳಿಗೆ ಸರಿಯಾದ ಆಹಾರ ದೊರಕದೆ ಅವರ ಅಭಿವೃದ್ಧಿ ಕುಂಠಿತವಾಗುತ್ತಿದೆ. ಮಕ್ಕಳು ಉತ್ತಮ ಆರೋಗ್ಯ ಹೊಂದಲು ಮತ್ತು ರಕ್ತದಲ್ಲಿನ ಸಿಡಿ-೪ ಕಡಿಮೆಯಾಗದಿರಲು ಪೌಷ್ಠಿಕ ಆಹಾರ ಅತ್ಯಂತ ಅಗತ್ಯ ಆದರೆ ಅವರಿಗೆ ಅದೂ ದೊರೆಯುತ್ತಿಲ್ಲ. ಎಷ್ಟೋ ಕುಟುಂಬಗಳಲ್ಲಿ ಮಕ್ಕಳಿಗೆ ಒಂದು ಹೊತ್ತಿನ ಊಟವೂ ದೊರೆಯುತ್ತಿಲ್ಲ. ಮಕ್ಕಳ ಕುಟುಂಬದ ಆಸರೆಯಲ್ಲಿಯೇ ಖುಷಿಯಾಗಿರುತ್ತಾರೆ ಎಂಬುದು ನಿಜ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸೋಂಕಿತ ನಿಶ್ಯಕ್ತ ತಂದೆ ತಾಯಿಗಳಿಗೆ ದುಡಿಯಲು ಶಕ್ತಿಯಿಲ್ಲ. ಮಕ್ಕಳಿಗೆ ಒಂದು ಹೊತ್ತಿನ ಊಟವನ್ನು ನೀಡಲೂ ಅವರಿಗೆ ಆಗುತ್ತಿಲ್ಲ” ಎಂದು ಮಿಲನ ಕೌಟುಂಬಿಕ ಬೆಂಬಲ ಮತ್ತು ಆಪ್ತಸಮಾಲೋಚನಾ ಕೇಂದ್ರದ ನಿದೇಶಕಿ ಜ್ಯೋತಿ ಕಿರಣ್‌ ಹೇಳುತ್ತಾರೆ.
“ಎಷ್ಟೋ ಮನೆಗಳಲ್ಲಿ ತಂದೆ ತಾಯಿ ಇಬ್ಬರೂ ಇಲ್ಲ. ಎಚ್‌ಐವಿಯಿಂದಾಗಿ ಬಂಧುಗಳೂ ಹತ್ತಿರ ಸೇರಿಸುತ್ತಿಲ್ಲ. ಹಾಗಾಗಿ ಮಕ್ಕಳೇ ತಮ್ಮ ತಂಗಿಯರ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಬೆಳಿಗ್ಗೆ ಶಾಲೆಗೆ ಹೋಗಿ ಸಂಜೆ ಕೆಲಸ ಮಾಡಿ ಮಕ್ಕಳನ್ನು ಪೊರೆಯುತ್ತಿದ್ದಾರೆ. ಈ ಪುಟ್ಟ ಬಾಲೆಯರ ಸ್ಥೈರ್ಯ ಮೆಚ್ಚುವಂತಹುದ್ದೇ. ಆದರೂ ಈ ಪುಟ್ಟ ಮಕ್ಕಳ ಹೆಗಲಿಗೆ ಈ ಹೊಣೆಯನ್ನು ವರ್ಗಾಯಿಸುವಂತಾದದ್ದು ನಮ್ಮ ಸಮಾಜದ ಕ್ರೌರ್ಯಕ್ಕೆ, ಎಚ್‌ಐವಿ ಬಗೆಗಿನ ತಿಳಿವಳಿಕೆಯ ಕೊರತೆಗೆ ಹಿಡಿದ ಕನ್ನಡಿಯಾಗಿದೆ ಎಂದು ವಿವರಿಸುತ್ತಾರೆ ಜಾನ್‌.
ಇಂದು ಅಂತಾರಾಷ್ಟ್ರೀಯ ಮಕ್ಕಳ ದಿನ. ನೂರಾರು ಹೇಳಿಕೆಗಳನ್ನು ಕೊಡುತ್ತೇವೆ. ಹೆಚ್ಚೆಂದರೆ ಒಂದಷ್ಟು ಚಾಕೊಲೇಟ್ಸು‌, ಸಾಧ್ಯವಾದರೆ ಸ್ವೀಟ್ಸು‌ ಕೊಟ್ಟು ಆಟವಾಡಿಸಿ ನಕ್ಕು ನಗಿಸಿ ಮುಗಿಸಿ ಬಿಡುತ್ತೇವೆ. ಆದರೆ ನಿಜವಾಗಲೂ ನಾವು ನಮ್ಮ ಮಕ್ಕಳಿಗೆ ಬಾಲ್ಯವನ್ನು ಕೊಡುತ್ತಿದ್ದೇವಾ, ಮುಂದೆ ನಮ್ಮ ಸಮಾಜದ ನವನಿರ್ಮಾಣ ಮಾಡುವ ಈ ಭಾವಿ ನಾಗರಿಕರ ಭವಿಷ್ಯವನ್ನು ಸರಿಯಾಗಿ ರೂಪಿಸುತ್ತಿರುವೆವಾ ಎಂಬುದರ ಬಗ್ಗೆ ಗಂಭೀರ ಚಿಂತನೆ ನಡೆಸುವ ತುರ್ತು ಅಗತ್ಯ ಈಗ ಎದುರಾಗಿದೆ.

Wednesday, May 12, 2010

ಸಾಧಕ

ಕಣ್ಣ ಹನಿ ಜಾರಿದರೆ ಅದನ್ನು ತೊಡೆದು ಕೊಳ್ಳಲು, ಮಾತು ಬೇಡವಾಗಿ ಬರಿ ಸ್ಪರ್ಶದಲ್ಲೇ ತಿಳಿಸಲು, ದುಃಖದ ಹೊರೆ ಹೆಚ್ಚಾದಾಗ ಅಪ್ಪಿಕೊಂಡು ಅತ್ತು ಹಗುರಾಗಲು ಕೈಗಳಿಲ್ಲ. ಖುಷಿಯಾದಾಗ ಕುಣಿಯಲು, ಮನಬಂದಂತೆ ಆಡಿ ನಲಿಯಲು, ಓಡಾಡಲು ಕಾಲುಗಳಿಲ್ಲ, ಒಂದೇ ಒಂದು ಕ್ಷಣ ಕೈ ಕಾಲಿಲ್ಲದ ಆ ಜೀವನದ ಬಗ್ಗೆ ಯೋಚಿಸಿದರೂ ಅಸಹಾಯಕತೆ, ನನ್ನನ್ನೇಕೆ ಹೀಗೆ ಮಾಡಿದೆ ಎಂಬ ಸಿಟ್ಟು ಕಾಡುತ್ತದಲ್ಲ.....
ಆದರೆ ೨೮ ರ ಹರೆಯದ ಆಸ್ಟ್ರೇಲಿಯಾದ ನಿಕ್‌ ವುಜಿಕಿಕ್‌ ಹಾಗಲ್ಲ. ಆತನಿಗೆ ಹುಟ್ಟಿನಿಂದಲೇ ಕೈಕಾಲುಗಳಿಲ್ಲ. ಮಗುವನ್ನು ನೋಡಿದ ತಂದೆತಾಯಿಗಳಿಗೊಂದು ಶಾಕ್‌. ಮಗನ ಮುಂದಿನ ಬದುಕಿನ ಬಗ್ಗೆ ಚಿಂತಿಸುತ್ತಾ ಆ ತಾಯ್ತಂದೆಗಳು ಅಳುತ್ತಾ ನಿದ್ದೆಯಿಲ್ಲದೆ ಸವೆಸಿದ ಇರುಳುಗಳೆಷ್ಟೋ. ಕೈಕಾಲುಗಳಿಲ್ಲದ ಈ ಮಗು ಎಂದಾದರೊಂದು ದಿನ ಎಲ್ಲರಂತೆ ಬದುಕ ಬಲ್ಲನಾ ಎಂಬ ಚಿಂತ ಅವರನ್ನು ಕಾಡುತ್ತಿತ್ತು. ಆದರೆ ಮುಂದೆ ಇದೇ ಮಗುವಿನ ಮಾತಿನ ಮಾಯಾ ಸ್ಪರ್ಶದಿಂದ ಹಲವು ಖಿನ್ನ ಜೀವಗಳ ಮನಸ್ಸು ಅರಳಲಿದೆ, ಅವನ ಮಾತಿನ ಸೆಲೆ ಹಲವರ ಬದುಕಿಗೆ ಸ್ಫೂರ್ತಿ ತುಂಬಲಿದೆ ಎಂಬುದು ಅವರಿಗೂ ಗೊತ್ತಿರಲಿಲ್ಲ.
ಬಾಲ್ಯದಲ್ಲಿ ಎಲ್ಲ ಮಕ್ಕಳೂ ಎದುರಿಸುವಂತಹ ಸಾಮಾನ್ಯ ಸಮಸ್ಯೆಗಳೆಲ್ಲವನ್ನೂ ನಿಕ್ ಎದುರಿಸಿದ. ‌ಆತನ ಬಾಲ್ಯವೇನೂ ಇತರ ಮಕ್ಕಳಿಗಿಂತ ಭಿನ್ನವಾಗಿರಲಿಲ್ಲ. ತನ್ನ ಸಾಟಿ ಮಕ್ಕಳ ಕಿರುಕುಳಕ್ಕೆ, ಗೇಲಿಗೆ ತುತ್ತಾದ. ಆತ್ಮಸಮ್ಮಾನದ ಕೊರತೆಯಿಂದ ಬಳಲಿದ. ಖಿನ್ನತೆ ಒಂಟಿತನಗಳಿಂದ ಕುಸಿದು ಹೋದ, ನಾನೇಕೆ ಇತರ ಮಕ್ಕಳಂತಿಲ್ಲ. ನನಗೇ ಏಕೆ ಹೀಗೆ ಕೈಕಾಲುಗಳಿಲ್ಲ. ನಾನೇಕೆ ಹೀಗೆ ಹುಟ್ಟಿದೆ? ತನ್ನನ್ನೇ ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ಕೇಳಿಕೊಂಡ. ಎಲ್ಲರಂತೆ ಸಹಜವಾಗಿರಲು ತುಡಿದ. ಅಪ್ಪ ಅಮ್ಮ ತಂದು ಕೊಟ್ಟ ಎಲೆಕ್ಟ್ರಿಕ್‌ ತೋಳುಗಳನ್ನು ಬಳಸಲು ನೋಡಿದ. ಅವು ಅವನ ಸಂಚಾರಕ್ಕೆ ಮತ್ತಷ್ಟು ತೊಡಕನ್ನುಂಟು ಮಾಡಿದವು. ಅವನ್ನು ಮೂಲೆಗೆತ್ತಿಟ್ಟ. ಛಲದಿಂದ ಹಾಗೆ ನಡಿಗೆಯನ್ನೂ, ದೈನಂದಿನ ಕಾರ್ಯಗಳನ್ನು ಮಾಡುವುದನ್ನು ರೂಢಿಸಿಕೊಂಡ. ಇವೆಲ್ಲದರ ನಡುವೆಯೂ ಅವನನ್ನು ಒಂದು ವಿಷಯ ಪದೇ ಪದೇ ಕಾಡುತ್ತಿತ್ತು. ನನ್ನ ಬದುಕಿಗೊಂದು ಉದ್ದೇಶ, ಸಾರ್ಥಕತೆ ಇದೆಯೇ? ಹಾಗೊಂದು ವೇಳೆ ಇದ್ದರೆ ಅದೇನು ಎಂಬ ಯೋಚನೆ ಬಂತು. ದಿನಕಳೆದಂತೆ ತನ್ನ ಅಂಗವೈಕಲ್ಯವನ್ನು ಒಪ್ಪಿಕೊಂಡ ನಿಕ್‌, ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುತ್ತಾ ಹೋದ. ತನ್ನ ಸಮಸ್ಯೆಗಳಿಗೇ ತನ್ನದೇ ಪರಿಹಾರಗಳನ್ನೂ ಕಂಡುಕೊಂಡ. ಏಳನೇ ತರಗತಿಯ ಹೊತ್ತಿಗೆ ನಿಕ್‌ ಶಾಲಾ ಕ್ಯಾಪ್ಟನ್‌ ಆದ, ವಿದ್ಯಾರ್ಥಿ ಮಂಡಳಿಯ ಜತೆಗೂಡಿ ವಿಕಲಾಂಗರ ಅಗತ್ಯಗಳ ಬಗೆಗಿನ ಪ್ರಚಾರಾಂದೋಲನಗಳನ್ನು ಸಂಘಟಿಸಿದ ಅನೇಕ ಸ್ಥಳೀಯ ಸಂಘ ಸಂಸ್ಥೆಗಳಿಗಾಗಿ ಹಣ ಹೊಂದಿಸುವ ಕಾರ್ಯಕ್ರಮಗಳನ್ನ ಮಾಡಿದ. ಇಲ್ಲೆಲ್ಲಾ ಅವನ ಕೈಹಿಡಿದೆತ್ತಿದ್ದು ಅವನ ಅಪಾರ ಆತ್ಮವಿಶ್ವಾಸ, ತನ್ನ ಬಗ್ಗೆ ಆತನಿಗಿದ್ದ ಅಚಲ ನಂಬುಗೆ. ಅವನೆಲ್ಲ ಕೆಲಸಗಳಿಗೂ ಅವನ ಕುಟುಂಬ ಮತ್ತು ಗೆಳೆಯರ ಪ್ರೋತ್ಸಾಹ ಇದ್ದೇ ಇತ್ತು. ಇವೆಲ್ಲದರ ನಡುವೆ ನಿಕ್‌ ಓದಿನಲ್ಲಿ ಹಿಂದೆ ಬೀಳಲಿಲ್ಲ. ಓದು ಅವನ ಜೀವನದ ಅವಿಭಾಜ್ಯ ಅಂಗವಾಗಿತ್ತು. ಎರಡು ಪದವಿಗಳನ್ನು ಪಡೆದ. ಹತ್ತೊಂಬತ್ತರ ಹರೆಯದ ಹೊತ್ತಿಗೆ, ತನ್ನದೇ ಉದಾಹರಣೆಯನ್ನು ಮುಂದಿಟ್ಟು, ಮಾತಿನ ಮೂಲಕ ಜನರ ಬದುಕಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡತೊಡಗಿದ.
ಬದುಕಿನಲ್ಲಿ ನಾವು ಎದುರಿಸುವ ಪ್ರತಿ ಸಮಸ್ಯೆ, ಪ್ರತಿ ಘಟನೆಗೂ ಯಾವುದೋ ಉದ್ದೇಶವಿದೆ. ಅದನ್ನು ಎದುರಿಸುವ ನಮ್ಮ ಮನೋಭಾವವೇ ಆ ಸಮಸ್ಯೆಯಿಂದ ಹೊರಬರುವ ಉತ್ತಮ ಮಾರ್ಗವನ್ನೂ ತೋರಿಸುತ್ತದೆ ಎಂಬುದು ನಿಕ್‌ನ ನಂಬುಗೆ.
ಹತ್ತು ಹಲವು ಪ್ರಶಸ್ತಿಗಳು ನಿಕ್‌ನನ್ನು ಹುಡುಕಿಕೊಂಡು ಬಂದಿವೆ. ಈಗ ನಿಕ್‌ ಅಂತಾರಾಷ್ಟ್ರೀಯ ಮಟ್ಟದ ಎನ್‌ಜಿಒ ಒಂದರ ಅಧ್ಯಕ್ಷನಾಗಿದ್ದಾನೆ. ಹಾಗೆಯೇ ತನ್ನ ಮಾತುಗಾರಿಕೆ ಭಾಷಣಗಳಿಂದ ಸ್ಫೂರ್ತಿ ತುಂಬಲೆಂದೇ Attitude Is Altitude ಕಂಪನಿಯನ್ನೂ ಸ್ಥಾಪಿಸಿದ್ದಾನೆ. ತನ್ನ ಮಾತುಗಾರಿಕೆಯ ಮೋಡಿಯ ಮೂಲಕ ೨೦ಕ್ಕೂ ಹೆಚ್ಚು ದೇಶಗಳಲ್ಲಿನ ಮಕ್ಕಳು, ಹದಿಹರೆಯದವರು ಯುವಕರು, ವ್ಯಾಪಾರಸ್ಥರು ಸಿಈಒಗಳು ಹೀಗೆ ಅನೇಕರಿಗೆ ಬದುಕಿನ ಬಗ್ಗೆ ಪ್ರೀತಿ, ಜೀವನದಲ್ಲಿ ಸ್ಫೂರ್ತಿ ತುಂಬಿದ್ದಾನೆ. ನಿಕ್‌ ಪ್ರತಿಬಾರಿ ಮಾತನಾಡುವಾಗಲೂ ಜೀವನಕ್ಕೊಂದು ಉದ್ದೇಶ, ಅದಕ್ಕೆ ಕಸವು ತುಂಬಲು ಬೇಕಾದ ಕನಸಿನ ಪ್ರಾಮುಖ್ಯವನ್ನು ಸಾರಿಸಾರಿ ಹೇಳುತ್ತಾನೆ. ಕನಸು ಕಾಣಲು ಹಿಂಜರಿಕೆ ಬೇಡ ಅದರ ಸಾಕಾರದೆಡೆಗೆ ಪುಟ್ಟಪುಟ್ಟ ಹೆಜ್ಜೆಯೂ ಸಾಕು ಗುರಿ ಮುಟ್ಟಲು. ಕಷ್ಟಗಳನ್ನು ಸಮಸ್ಯೆಗಳೆಂದು ಭಾವಿಸದೆ ಅವನ್ನು ಅವಕಾಶಗಳೆಂದು ನೋಡಿ ಹಾಗಿದ್ದಾಗ ದೊಡ್ಡದನ್ನು ಸಾಧಿಸಲು ಸಾಧ್ಯ. ಹೀಗಿದ್ದಾಗ ನಮ್ಮ ಹಾಗು ನಮ್ಮ ಸುತ್ತಮುತ್ತಲಿನವರ ಜೀವನದಲ್ಲಿ ಬದಲಾವಣೆ ತರಲು ಸಾಧ್ಯ. ಸೋಲನ್ನು ಕಲಿಕೆಯಾಗಿ ಪಾಠವಾಗಿ ಅಪ್ಪಿಕೊಳ್ಳಿ, ಸೋಲು ತಪ್ಪಿತಸ್ಥ ಭಾವಕ್ಕೆ ಮತ್ತು ಭಯಕ್ಕೆ ಕಾರಣವಾಗಿ ನಮ್ಮನ್ನು ನಿಂತಲ್ಲೇ ನಿಂತು ಬಿಡುವಂತೆ, ಕುಸಿಯುಂತೆ ಮಾಡುವುದು ಬೇಡ ಎಂದು ತನ್ನದೇ ಉದಾಹರಣೆ ಕೊಟ್ಟು ಹೇಳುತ್ತಾ ಹೋಗುತ್ತಾನೆ.
ಪ್ರತಿ ಮನಯಷ್ಯನ ಜೀವನವನ್ನು ನೋಡುವ ಮನೋಭಾವ ಬದಲಾದರೆ ಜೀವನದಲ್ಲಿ ಅರ್ಧಗೆದ್ದಂತೆ... ಎಷ್ಟು ಸತ್ಯವಾದ ಮಾತು!
ಈತ ನಿಜವಾದ ಯೂತ್‌ ಐಕಾನ್‌...

Wednesday, April 21, 2010

Tuesday, April 6, 2010

ಬಸ್

“ಎಷ್ಟೇ ಬೇಗ ಕೆಲಸ ಮುಗಿಸಿ ಹೊರಟರೂ ಐದು ನಿಮಿಷ ಆಕಡೆ ಈ ಕಡೆ ಆಗಿಯೇ ಬಿಡತ್ತೆ ಹಾಳಾದ್ದು.” ಗೊಣಗುತ್ತಲೇ ಬಸ್ ಹತ್ತಿದರು ಅನಿತಾ. ಹತ್ತಿರ ಬಂದವರೇ ನನ್ನನ್ನು ನೋಡಿ ನಸು ನಕ್ಕು “ನೋಡು ಇವತ್ತು ಬೆಳಿಗ್ಗೆ ಮಗ ಬಿಸಿಬೇಳೆಭಾತ್ ಬೇಕೆಂದ ಮಾಡಿದ್ದೆ. ನಿನಗೂ ನಾನು ಮಾಡಿದ ಬಿಸಿಬೇಳೆಭಾತ್ ಇಷ್ಟ ಅಲ್ವ ? ಅದ್ಕೇ ಒಂದಿಷ್ಟು ಡಬ್ಬಿಗೆ ಹಾಕ್ಕೊಂಬಂದಿದೀನಿ ತಗೋ. ಹಾಗೆ ಕವರ್ನಲ್ಲಿ ಒಂದಿಷ್ಟು ಕೋಡುಬಳೆನೂ ಇದೆ ಟೈಮಾದಾಗ ಬಾಯಿಗೆ ಹಾಕ್ಕೊ” ಎಂದು ಕೈಗಿಟ್ಟರು.
ಅಷ್ಟು ಹೊತ್ತಿಗೆ ಮುಂದೆ ಹೋಗ್ರಿ ಎನ್ನತ್ತಾ ಬಂದ ಕಂಡೆಕ್ಟರ್ “ಏನ್ರೀ ಮೇಡಂ ಇವತ್ತು ಲೇಟು. ಎಲ್ಲ ಆರಾಮ ತಾನೆ. ದೇವಯ್ಯ ಪಾರ್ಕ್ ಹತ್ರ ಹತ್ತುತ್ತಿದ್ರಲ್ಲ ನಿಮ್ಮ ಫ್ರಂಡ್ ಅವರು ಎರಡುದಿನದಿಂದ ಬರ್ತಾನೆ ಇಲ್ಲ.” “ಹಾಂ. ಹೌದಪ್ಪ ಅವರ ಮನೇಲೇನೋ ಫಂಕ್ಷನ್ ಅಂತೆ ಇನ್ನೆರಡು ದಿನ ಬರೋದಿಲ್ವಂತೆ” ಎಂದರು ಅನಿತಾ.
ಹಾಗೆ ಒಂದು ಮೂರ್ನಾಲ್ಕು ಸ್ಟಾಪ್ ಹೋಗುವುದರೊಳಗೆ ಬಸ್ ಪೂರ್ತಿ ಕಿಕ್ಕಿರಿದು ತುಂಬಿಬಿಡುತ್ತಿತ್ತು. ಅದು ಪಿಎಚ್ಎಸ್ ಆದದ್ದರಿಂದ ದಿನವೂ ಅದೇ ಬಸ್ಸಿಗೆ ಓಡಾಡುವುವರು ಹಲವರಿದ್ದರು. ನನಗೆ ಬೆಳಗಿನ ಪಾಳಿಯಿದ್ದಾಗ ಆಗಾಗ ನಾನು ಅವರ ಜತೆಯಾಗುತ್ತಿದ್ದೆ. ಸಂಜೆ ಬರುವಾಗಲೂ ಅನೇಕರು ಸಿಗುತ್ತಿದ್ದರು. ಮನೆಗೆ ಬೇಕಾದ ತರಕಾರಿ ಹಿಡಿದ ಕೆಲವರು, ನಮ್ಮ ಆಫೀಸಿನ ಮುಂದೆ ಸಂಜೆ ತರಕಾರಿ ಚೆನ್ನಾಗಿ ಬರತ್ತೆ ಎಂದು ಯಾರಾದರೂ ಹೇಳಿದರೆ. ರೀ ನೀವು ತಗೊಳೋವಾಗ ನನಗೂ ತಂದುಬಿಡಿ ಎನ್ನುವವರೂ ಇದ್ದರು. ಹಾ ಅದರಲ್ಲೇನು ತರೋಣವಂತೆ ಎನ್ನುತ್ತಿದ್ದರು.
ಈ ಬಸ್ ಬರಿ ನಮ್ಮನ್ನು ನಮ್ಮ ನಮ್ಮ ಆಫೀಸಿಗೆ ಹೊತ್ತೊಯ್ಯುವ ವಾಹನವಷ್ಟೇ ಆಗಿರಲಿಲ್ಲ. ಬೆಳಿಗ್ಗೆಯಾದರೆ ಮನೆಯ ಕಷ್ಟ ಸುಖಗಳನ್ನು ಹಂಚಿಕೊಳ್ಳುವ, ಸಂಜೆಯಾದರೆ ಬಾಸಿನ ಇಲ್ಲಾ ಆಫೀಸಿನ ಕಿರಿಕಿರಿ ಫ್ರಸ್ಟ್ರೇಶನ್ಗಳನ್ನು ಹಂಚಿಕೊಳ್ಳುವ ಚರ್ಚಿಸುವ, ಬಗೆಬಗೆಯ ದೃಷ್ಟಿಕೋನಗಳಿಂದ ವಿಶ್ಲೇಷಿಸುವ, ವಿಚಾರ ವಿನಿಮಯ ಮಾಡುತ್ತಾ ಮಾತುಕತೆಯಾಡುವ, ಎಲ್ಲ ವಯೋಮಾನದ ಗೆಳತಿಯರು ಸೇರುವ ವೇದಿಕೆಯಾಗಿತ್ತು.
ಒಂದೊಂದು ಬಾರಿ ಬಸ್ ತಪ್ಪಿಸಿಕೊಂಡರಂತೂ ಹಳಹಳಿಸುವಂತಾಗುತ್ತಿತ್ತು. ಯಾರಾದರೂ ಬರದೇ ಇದ್ದರೆ ಗುರುತಿಸಿ ಅರೆ ಅವರು ಬಹಳದಿನದಿಂದ ಬರುತ್ತಿಲ್ಲವಲ್ಲ ಏನಾಯ್ತು ಎಂದು ವಿಚಾರಿಸುವ ಕಳಕಳಿಯಿತ್ತು. ಒಟ್ಟಿನಲ್ಲಿ ಈ ಬೆಳಿಗ್ಗೆ ಒಂಭತ್ತರ ಬಸ್ ಅತ್ಯಂತ ಚೇತೋಹಾರಿ ಅನುಭವ ನೀಡುತ್ತಿತ್ತು.
ಕಾಲ ಕಳೆದಂತೆ ನಾನು ಬೆಂಗಳೂರು ಬಿಟ್ಟೆ. ಬಸ್ ಹತ್ತುವುದು ಅಪರೂಪವಾಯ್ತು. ಎಷ್ಟೋ ವರುಷಗಳ ನಂತರ ಬೆಂಗಳೂರಿಗೆ ಬಂದವಳಿಗೆ ಬಸ್ ಹತ್ತುವ ತವಕ. ಪುಷ್ಪಕ್ಗಳೇ ಆಹಾ ಚೆನ್ನಾಗಿದೆ, ಆದ್ರೆ ಬಹಳ ತುಟ್ಟಿ ಕಣ್ರಿ ಎನ್ನುತ್ತಿದ್ದವರಿಗೆ, ಈಗಿನ ವಜ್ರಗಳು ಬಂದು ಬೆರಗು ಹುಟ್ಟಿಸಿವೆ. ಅದೇ ಬಸ್ ಮಾರ್ಗದಲ್ಲಿ ಮತ್ತೊಮ್ಮೆ ಹೋದಾಗ ಆ ದಿನಗಳ ನಾಸ್ಟಲ್ಜಿಕ್ ಭಾವ ಇನ್ನಿಲ್ಲದಂತೆ ಕಾಡಿತು. ಯಾರಾದರೊಬ್ಬರನ್ನಾದರೂ ಮಾತನಾಡಿಸೋಣವೆಂದರೆ ಎಲ್ಲರೂ ಅವರವರ ಲೋಕದಲ್ಲಿ ಬ್ಯುಸಿ. ಎಸ್ಎಂಎಸ್ ಮಾಡುವುದರಲ್ಲೋ, ಎಂಪಿತ್ರೀಯಲ್ಲಿ ಹಾಡು ಕೇಳುವುದರಲ್ಲೋ, ಫೋನಿನಲ್ಲಿ ಮಾತನಾಡುವುದರಲ್ಲೋ ಮುಳುಗಿಬಿಟ್ಟಿದ್ದಾರೆ. ಈಗ ಬಂದಿರುವ ಮೊಬೈಲ್ಗಳಿಂದಾಗಿ ಉಳಿಯುತ್ತಿದ್ದ ಚೂರುಪಾರು ವೈಯಕ್ತಿಕ ಸಮಯವೂ ಇಲ್ಲದಂತಾಗಿದೆ. ಆಫೀಸಿನಲ್ಲಿನ ಬಾಸ್ ಫೋನಿನ ಮೂಲಕ ಮನೆಗೂ ನುಗ್ಗುತ್ತಾನೆ. ಗೆಳತಿಯರೊಂದಿಗಿನ ಗೆಟ್ಟುಗೆದರ್ಗಳಲ್ಲೂ ಮನೆಯ ಕೆಲಸಗಳು ಕಾಡುತ್ತವೆ. ಹಾಗೆಯೇ ನಿಶ್ಚಿಂತೆಯಿಂದ ಒಬ್ಬರಿಗೊಬ್ಬರು ಮಾತನಾಡುತ್ತಿದ್ದ ಜನ, ಈಗ ದಿನವೂ ಅದೇ ಬಸ್ನಲ್ಲಿ ಓಡಾಡುತ್ತಿದ್ದರೂ ಅಪರಿಚಿತರಾಗುತ್ತಾ ಹೋಗುತ್ತಿದ್ದಾರೆ. ಸಂಜೆಯವೇಳೆಗೆ ಬಸ್ ಹತ್ತುವ ಹೊತ್ತಿಗೇ ಜನ ಸೋತು ಸುಣ್ಣವಾಗಿಬಿಟ್ಟಿರುತ್ತಾರೆ. ಕಿವಿಯಲ್ಲಿ ಇಯರ್ಫೋನ್, ಸೀಟು ಸಿಕ್ಕರೆ ದಣಿದ ದೇಹ ಮತ್ತು ಕಣ್ಣುಗಳಿಗೆ ಒಂದು ಸಣ್ಣ ಜೊಂಪು ನಿದ್ದೆ. ನಮ್ಮದೇ ರಗಳೆ ಸಾಕಷ್ಟಿರುವಾಗ ಬೇರೆಯವರ ಗೊಡವೆ ಏಕೆ ಎಂಬ ಭಾವ. ಎಲ್ಲ ಆಧುನಿಕ ಸಲಕರಣೆಗಳ ಟಕಾಡಿನಲ್ಲಿ ಮಾನವ ಸಂಬಂಧಗಳು ತೆಳುವಾಗುತ್ತಾ ಹೋಗುತ್ತಿವೆ.

Friday, April 2, 2010

ಎಮಿಲಿ ಡಿಕಿನ್ಸನ್

ಎಮಿಲಿ ಡಿಕಿನ್ಸನ್‌ (1830-1886), ನನ್ನನ್ನು ಬಹುವಾಗಿ ಕಾಡುವ ಕವಯತ್ರಿಯರಲ್ಲೊಬ್ಬಳು. ೧೯ನೇ ಶತಮಾನದ ಈ ಅಮೆರಿಕನ್‌ ಕವಯತ್ರಿಯ ಕವನಗಳು ಹೆಸರಾದದ್ದು ಆಕೆ ಕವನಗಳಿಗೆ ಬಳಸಿದ ವಿಶಿಷ್ಟ ವಸ್ತು ಮತ್ತು ವಿಭಿನ್ನ ಪ್ರಾಸಗಳಿಂದಾಗಿ. ನೂರಾರು ಕವನಗಳನ್ನು ಬರೆದಿರುವ ಈಕೆ ೨೧ನೇ ಶತಮಾನದ ಕವಿಗಳಿಗೂ ಸ್ಫೂರ್ತಿಯ ಸೆಲೆಯಾಗಿದ್ದಾಳೆ. “Because I Could Not Stop for Death”, “Heart, we will forget him!”, “I'm Nobody! Who are You?”, and “Wild Nights! Wild Nights!”; ಇವು ಆಕೆಯ ಅತ್ಯಂತ ಪ್ರಸಿದ್ಧ ಕವನಗಳಲ್ಲಿ ಕೆಲವು ಮಾತ್ರ. ತೀವ್ರ ಸಂವೇದನಾಶೀಲೆಯಾಗಿದ್ದ ಎಮಿಲಿ ತನ್ನ ಅನೇಕ ಕವನಗಳಲ್ಲಿ ಸಾವನ್ನು ಗೆಳೆಯನಂತೆ ಮನೆಗೆ ಭೇಟಿ ನೀಡುವ ಪರಮಾಪ್ತನಂತೆ ಚಿತ್ರಿಸುವ ಪರಿ ಮನಕ್ಕೆ ತಟ್ಟುತ್ತದೆ. ನನ್ನನ್ನುಗ ಬಹುವಾಗಿ ಕಾಡಿದ ಮನಕ್ಕೆ ಅತ್ಯಂತ ಆಪ್ತವಾದ “Because I Could Not Stop for Death”ನ ಅನುವಾದ ಇಲ್ಲಿದೆ.

ಸಾವಿಗಾಗಿ ನಿಲ್ಲುವವಳಲ್ಲ...

ಸಾವಿಗಾಗಿ ಕಾಯಲು ಪುರಸೊತ್ತಿಲ್ಲ-
ಹಾಗಾಗಿ ಅವನೇ ನನಗಾಗಿ ನಿಂತ-
ಆ ಗಾಡಿಯಲ್ಲಿದ್ದದ್ದು ನಾವು
ಮತ್ತು ಅಮರತ್ವ.

ಸಾವಕಾಶವಾಗಿ ಸಾಗಿತು ಬಂಡಿ- ಆತನಿಗೆ ಆತುರವೆಂಬುದೇ ಇರಲಿಲ್ಲ
ಮತ್ತು ನಾನು ನನ್ನ ಕೆಲಸ, ಬಿಡುವು
ಬದಿಗೆತ್ತಿ ಇಟ್ಟಿದ್ದೆ, ಆತನ ಸಭ್ಯತೆಗಾಗಿ.

ಶಾಲೆಯನ್ನು ದಾಟಿ ಬಂದೆವು ಮಕ್ಕಳೆಲ್ಲ
ಬಿಡುವಿನಲ್ಲಿ ಆಟವಾಡುತ್ತಿದ್ದರು ಬಯಲಿನಲ್ಲಿ-
ಧಾನ್ಯದಿಂದ ತೂಗುತ್ತಿದ್ದ ಹೊಲಗಳನ್ನೆಲ್ಲ ದಾಟಿ ಬಂದೆವು-
ಕಂದುತ್ತಿದ್ದ ಸೂರ್ಯನನ್ನು ಹಿಂದಿಕ್ಕಿ ಬಂದೆವು-

ಇಲ್ಲ ಆತನೇ ನಮ್ಮನ್ನು ದಾಟಿ ಹೋದ-
ಮಂಜಿನ ಹನಿಗಳು ಉಲುಕುತ್ತಿದ್ದವು ಮತ್ತು ಛಳಿ-
ನವಿರಾಗಿತ್ತು, ನನ್ನ ಗೌನು-
ನನ್ನ ಮಫ್ಲರ್- ಮುಖಪರದೆ ಮಾತ್ರ-

ಮನೆಯೊಂದರ ಮುಂದೆ ನಿಂತೆವೊಂದರೆ ಗಳಿಗೆ
ಭೂಮಿ ತುಸು ಉಬ್ಬಿದಂತಿತ್ತು-
ಛಾವಣಿ ಮಸುಕಾಗಿ ಕಾಣುತ್ತಿತ್ತು
ಭೂಮಿಯಲ್ಲಿನ ಕಾರ್ನೀಸಿನಂತೆ-

ಅಂದಿನಿಂದ ಶತಮಾನಗಳೇ ಕಳೆದರೂ- ಕೂಡ
ಅನಿಸುತ್ತಿದೆ ದಿನವೊಂದರಂತೆ
ಅಮರತ್ವದೆಡೆಗೆ ನಡೆದು ಬಂದಂತೆ.

Wednesday, March 31, 2010

ಹೆಜ್ಜೆ ಮೂಡದ ಹಾದಿ....

ಸೋಡಿಯಂ ವೇಪರ್ ಬೆಳಕಿನಧಾರೆ. ಅಲ್ಲಲ್ಲಿ ಕತ್ತಲು. ದಾರಿಯ ಬದಿಯಲ್ಲೇ ಕೈಯನ್ನೇ ದಿಂಬಾಗಿಸಿ ಲುಂಗಿಯನ್ನೇ ಹೊದ್ದು ಮಲಗಿದ ಜನ. ಊಳಿಡುವ ನಾಯಿಗಳು, ಸುರಿವ ಮಂಜು, ತಣ್ಣನೆಯ ಗಾಳಿ. ಖಾಲಿ ಖಾಲಿ ರಸ್ತೆ.
ಒಂದು ಕ್ಷಣ ಮುಂದಡಿಯಿಡಲು ಹಿಂಜರಿಕೆಯಾಯ್ತು. ಮನೆಯಲ್ಲೇನೋ ಧೈರ್ಯವಾಗಿ ಹೇಳಿ ಬಂದಿದ್ದೆ. ಯಾರೂ ಇಲ್ಲದೆ ಒಬ್ಬಳೇ ಹೋಗುತ್ತೀಯಾ, ವಾಕಿಂಗ್‌ ಹೋದರೆ ಮಗಳನ್ನು ಶಾಲೆಗೆ ಕಳಿಸಲು ಹೊತ್ತಾಗುವುದಿಲ್ಲವೆ ಎಂದೆಲ್ಲ ರಗಳೆ ತೆಗೆದವರಿಗೆ, ಬೇಗ ಎದ್ದು ಹೋಗಿ ವಾಕ್‌ ಮುಗಿಸಿ ಹಿಂದಿರುಗುತ್ತೇನೆ ಎಂದಿದ್ದೆ. ಹಿಂದಿನ ದಿನವೇ ಗೆಳತಿಯರನ್ನು ಕೇಳಿದಾಗ ಮತ್ತದೇ ನಾಳೆ ಬೇಡ ನಾಡಿದ್ದಿನಿಂದ ಹೋಗೋಣ ಎಂದ ಕುಂಟು ನೆಪಕ್ಕೆ ಬೇಸತ್ತು, ಇಲ್ಲ ನಾಳೆ ಬೆಳಿಗ್ಗೆ ನೀವ್ಯಾರೂ ಬರದಿದ್ದರೂ ನಾನೊಬ್ಬಳೇ ವಾಕಿಂಗ್‌ ಹೋಗುತ್ತೇನೆ ಎಂದು ಹೇಳಿಬಿಟ್ಟಿದ್ದೆ.ಇಷ್ಟೆಲ್ಲ ರಗಳೆಗಳ ನಡುವೆ ಹೊರಟವಳು ನಿಜವಾಗಲೂ ರಸ್ತೆಗೆ ಕಾಲಿಟ್ಟಾಗ ಅರೆ ನಿಜವಾಗಲೂ ನೋಡಿದರೆ ಯಾರೂ ಇಲ್ಲ ಒಬ್ಬಳೇ ಸ್ವಲ್ಪ ಅಳುಕಾಯ್ತು. ಆದರೂ ಎಲ್ಲರಿಗೂ ಹೇಳಿದ್ದು ನೆನಪಾಗಿ ಮುಂದಡಿಯಿಟ್ಟೆ.

ತಣ್ಣನೆಯ ಗಾಳಿ ಮೈಗೆ ಕಚಗುಳಿಯಿಟ್ಟಿತು. ಸ್ವಲ್ಪದೂರ ನಡೆದು ಬಂದಾಗ ಪಾಕೆಟ್‌ ಹಾಲಿನ ಲಾರಿ ಅದಾಗ ತಾನೆ ಬಂದಿತ್ತು. ಹಾಲಿನವರು ಅದನ್ನು ಲೆಕ್ಕ ಹಾಕುವ, ಇಳಿಸಿಕೊಳ್ಳುವ ಧಾವಂತದಲ್ಲಿದ್ದರು. ಇನ್ನೊಂದಷ್ಟು ಮುಂದಕ್ಕೆ ಹೋದಾಗ ಪೇಪರ್ ಅದಾಗ ತಾನೆ ಬಂದಿತ್ತು ಪೇಪರಿನವ ಪೇಪರ್ ಬಾಯ್‌ಗಳಿಗೆ ಅದನ್ನು ಎಣಿಸಿ ಕೊಡುತ್ತಿದ್ದ. ಪೇಪರಿನ ಹೊಸ ಇಂಕಿನ ವಾಸನೆಯನ್ನು ಆಘ್ರಾಣಿಸಿ ಮುಂದಕ್ಕೆ ನಡೆದಾಗ ಹಾಡೊಂದನ್ನು ಗುನುಗುತ್ತಾ ಗುಂಪು ಗುಂಪಾಗಿ ಬೀದಿಯ ಕಸಗುಡಿಸುತ್ತಿದ್ದವರು ಎದುರಾದರು.ಅಲ್ಲೇ ಹತ್ತಿರದಲ್ಲೆಲ್ಲೋ ಸಿಕ್ಕ ಹಳೆ ಪೇಪರ್ ಒಣ ಎಲೆಗಳನ್ನು ಒಟ್ಟಾಗಿಸಿ ಲೋಕಾಭಿರಾಮದ ಮಾತನಾಡುತ್ತಾ ಚಳಿ ಕಾಯಿಸುತ್ತಿದ್ದರು. ಅಲ್ಲಿಯೇ ಪಕ್ಕದ ಬಂಡಿಯಲ್ಲಿ ಬಿಸಿಬಿಸಿ ಚಾಯ್‌ ಮಾರುತ್ತಿದ್ದವನ ಸುತ್ತ ನೆರೆದವರು ಸುರ್.. ಸೊರ್... ಎನ್ನುತ್ತಾ ಚಹವನ್ನು ಸವಿಯುತ್ತಿದ್ದರು ಹಲವರು.
ಹಾಗೆ ಮುಂದೆ ಒಳ್ಳೆಯ ಶೂ ತೊಟ್ಟು ವಾಕ್‌ಗೆ ಹೊರಟ ಎಂಭತ್ತರ ಹರೆಯದ ದಂಪತಿಯೊಂದು ಕಾಣಿಸಿತು. ಮತ್ತೊಬ್ಬ ಹುಡುಗ ಅಲ್ಲಿ ಜಾಗ್‌ ಮಾಡುತ್ತಾ ನನ್ನನ್ನು ದಾಟಿ ಹೋದ. ಅಲ್ಲಲ್ಲಿ ನನ್ನಂತೆ ಒಂಟಿಯಾಗಿ ವಾಕ್ಗೆ ಬಂದ ಹಲವರು, ಗುಂಪಾಗಿ ಬಂದ ಹೆಂಗೆಳೆಯರು ಕಾಣತೊಡಗಿದರು.
ಮುಂಜಾನೆಯ ಸೊಬಗು ಮೆಲ್ಲನೆ ಬಿಚ್ಚಿಕೊಳ್ಳತೊಡಗಿತು. ನಾನೂ ಮುಂಜಾನೆಯ ವಾಕ್‌ ಆಸ್ವಾದಿಸ ತೊಡಗಿದೆ. ಹೊರಡುವ ಮೊದಲು ಇದ್ದ ಹಿಂಜರಿಕೆ ಈಗ ಇಲ್ಲವಾಗಿತ್ತು. ಇಷ್ಟು ದಿನ ಈ ಹೊತ್ತಿನಲ್ಲಿ ಯಾರು ಎದ್ದಿರುತ್ತಾರೆ ಎಂದು ಮುಸುಕು ಹೊದ್ದು ಮಲಗುತ್ತಿದ್ದ ನನಗೆ ನಸುಕಿನ ಸವಿಯುಂಡಾಗಿತ್ತು. ಯಾರೂ ಇರುವುದಿಲ್ಲ ನಾನೊಬ್ಬಳೇ ಹೊರಟಿದ್ದೇನೆ ಎಂದುಕೊಂಡಿದ್ದ ನನಗೆ, ನನಗಿಂತ ಮೊದಲು ಹೊರಟಿದ್ದ ಹಲವರು ಸಿಕ್ಕರು.
ಜಗತ್ತೇ ಹಾಗಲ್ಲವೇ, ನಿಜವಾಗಿಯೂ ಹೆಜ್ಜೆ ಮೂಡದ ಹಾದಿಯೆಂಬುದಿಲ್ಲ. ಯಾವುದೇ ಹೊಸ ಹಾದಿ ಹಿಡಿದರೂ ಅಲ್ಲಿ ನಮಗಿಂತ ಮೊದಲು ನಡೆದ ಹೆಜ್ಜೆಗುರುತುಗಳು ಕಾಣಸಿಗುತ್ತವೆ. ಹೆಜ್ಜೆ ಮೂಡದ ಹಾದಿಯಲ್ಲಿ ಪಯಣಿಗಳು ನಾನೊಬ್ಬಳೇ ಅಲ್ಲ.... ಮುಂದಿದ್ದಾರೆ ನೂರಾರು..

Sunday, March 28, 2010

ಭೂ ‘ತಾಪ’


ಪ್ರತಿವರ್ಷ ಮಾರ್ಚ್ ತಿಂಗಳ ಕಡೆಯ ಶನಿವಾರ ಗ್ಲೋಬಲ್ ವಾರ್ಮಿಂಗ್ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದ ಬಹುತೇಕ ಎಲ್ಲ ದೇಶಗಳ ಪ್ರಮುಖ ಪಟ್ಟಣಗಳಲ್ಲಿಯೂ ಪರಿಸರವನ್ನು ಉಳಿಸಲು ಪಣ ತೊಡಲಾಗುತ್ತದೆ. ವಿಶ್ವದ ಅತಿ ಎತ್ತರದ ಕಟ್ಟಡ ಎಂದೇ ಹೆಸರಾದ ಬುರ್ಜ್ ಎ ದುಬೈ ಕೂಡ ಇದರಲ್ಲಿ ಭಾಗಿಯಾಗಲಿದೆ.
ಇದನ್ನು ಬೆಂಬಲಿಸಲೆಂದೇ ವಿಶ್ವದೆಲ್ಲೆಡೆ ಒಂದು ಗಂಟೆ ಸಂಜೆ ೮.೩೦ ರಿಂದ ೯.೩೦ರ ವರೆಗೆ ವಿದ್ಯುತ್ ದೀಪಗಳನ್ನು ಆರಿಸಲಾಗುತ್ತದೆ. ವಿದ್ಯುತ್ ಉಪಕರಣಗಳ ಬಳಕೆಯನ್ನು ನಿಲ್ಲಿಸಲಾಗುತ್ತದೆ. ಈ ಒಂದು ಗಂಟೆ ಕಾಲವನ್ನು ಅರ್ಥ್ ಅವರ್ ಎಂದೇ ಕರೆಯಲಾಗುತ್ತದೆ.
ಬನ್ನಿ ಸ್ವಯಂ ಪ್ರೇರಿತರಾಗಿ ನಾವು ಪರಿಸರ ರಕ್ಷಣೆಯ ಈ ಕಾರ್ಯದಲ್ಲಿ ನಮ್ಮ ಅಳಿಲು ಸೇವೆ ಮಾಡೋಣ. ಭೂ ‘ಬಿಸಿ’ ಇಳಿಸಲು ನೀರಿನ ಬಳಕೆಯನ್ನು ಮಿತಗೊಳಿಸೋಣ. ತರಕಾರಿಗಳನ್ನು ಸೇವಿಸೋಣ. ಈ ಒಂದು ಗಂಟೆ, ನಮ್ಮ ಟಿವಿಯ ರಿಮೋಟ್ ಬದಿಗಿಡೋಣ. ಕಂಪ್ಯೂಟರಿಗೆ ಬಾಯ್ ಹೇಳಿ ದೀಪವಾರಿಸಿ, ಹಳೆಯ ಹಣತೆಯನ್ನು ಹಚ್ಚೋಣ. ಅದರ ಎಣ್ಣೆಯ ಘಮಲು,ಮಂದ ಬೆಳಕಿನ ಸಾಮಿಪ್ಯ ಸವಿಯೋಣ. ಮಿಕ್ಸರ್, ಫ್ರಿಜ್ ಎಸಿಗಳನ್ನು ಆರಿಸಿ ಟೆರೆಸಿನ ತಂಪುಗಾಳಿಗೆ ಮೈಯೊಡ್ಡೋಣ.
ಯಾರಿಗೆ ಗೊತ್ತು ಈ ಒಂದು ತಾಸು ಪರಿಸರದ ಉಳಿವಿನ ಜತೆಗೆ ಮಾತೇ ಮರೆತ ಸಂಬಂಧಗಳಿಗೆ ಮರಳಿ ಬೆಸುಗೆ ಹಾಕಬಲ್ಲದೇನೋ.

Friday, March 26, 2010

ಸಂಕ್ರಾಂತಿ


ಸಂಕ್ರಾಂತಿ ಎಂದೊಡನೆ ನೆನಪಾಗುವುದು ಕಬ್ಬು ಎಳ್ಳು ಬೆಲ್ಲ ಮತ್ತು ಅಜ್ಜಿ.
ರೇಷ್ಮೆ ಲಂಗ ಹಾಕಿ, ಮೊಗ್ಗಿನ ಜಡೆ ಹೆಣೆದು, ಕಣ್ಣಿಗೆ ಕಾಡಿಗೆ ಹಣೆಗೆ ದುಂಡನೆಯ ಕುಂಕುಮವಿಟ್ಟು, ಗಲ್ಲಕ್ಕೊಂದು ದೃಷ್ಟಿ ಬೊಟ್ಟಿಟ್ಟ ನಂತರ ಸ್ವಲ್ಪ ಹಿಂದೆ ಸರಿದು ಎಲ್ಲ ಸರಿಯಾಗಿದೆಯಾ ಎಂದು ನಿರುಕಿಸಿ, ಎಷ್ಟು ಮುದ್ದಾಗಿದ್ದೀಯಲ್ಲೇ ಮಹಾಲಕ್ಷ್ಮಿಯ ಹಾಗೆ ಎಂದು ಮುದ್ದಿಡುತ್ತಿದ್ದಳು ಅಜ್ಜಿ.
ಎಳ್ಳು-ಬೆಲ್ಲ, ಬದನೆ ಬಾಳೆ ಹಣ್ಣು ಪುಟ್ಟದೊಂದು ಆಟಿಕೆ ಅರಿಶಿನ ಕುಂಕುಮಗಳನ್ನು ಇಟ್ಟು ಎಲ್ಲರಿಗೂ ಬೀರಿ ಬರಲು ಹೇಳುತ್ತಿದ್ದಳು. ನಾನು ಖುಷಿಯಿಂದ ಹೋಗುತ್ತಿದ್ದೆ. ಅಜ್ಜಿಯ ಮಾತನ್ನೇ ನಿಜವೆಂದು ನಂಬಿ ಪ್ರಂಪಚಕ್ಕೆಲ್ಲಾ ನಾನೇ ಸುಂದರಿಯೇನೋ ಎಂಬಂತೆ ಬೀಗುತ್ತಾ ಹೆಜ್ಜೆಯಿಡುತ್ತಿದ್ದೆ.
ಬೀರಲು ಹೊಟ ಸ್ವಲ್ಪ ಹೊತ್ತು ಇರುತ್ತಿದ್ದ ಉತ್ಸಾಹ, “ಎಲ್ಲರೂ ಎಷ್ಟು ಚೆನ್ನಾಗಿದ್ದೀಯಲ್ಲೇ. . .” ಎಂದು ಹಿಂಡಿದ್ದರಿಂದ ಕೆಂಪಾಗಿ ನೋಯುವ ಗಲ್ಲ, ಭಾರದಿಂದ ಜಗ್ಗುವ ಮೊಗ್ಗಿನ ಜಡೆಯಿಂದಾಗಿ ಅಳಕುವ ಕೂದಲು, ನಡೆಯುವಾಗ ತೊಡರುವ ಲಂಗ, ನೋಯುವ ಕಾಲು ತುಂಬ ಕಿರಿಕಿರಿಯೆನ್ನಿಸುತ್ತಿತ್ತು.
ಹಬ್ಬದ ಹಿಂದಿನ ದಿನಗಳಲ್ಲಂತೂ ಆಕಳ ಸಗಣಿಯಿಂದ ಅಂಗಳ ಸಾರಿಸಿ ಚಂದದ ರಂಗೋಲಿಯಿಟ್ಟು ಚಿಕ್ಕಮ್ಮಂದಿರು ಬಣ್ಣ ತುಂಬುವಾಗ ನಾನೂ ಬಣ್ಣ ತುಂಬುವೆನೆಂದು ಹಠ ಹಿಡಿದ್ದದ್ದು, ಚಿಕ್ಕಮ್ಮ ದಿಡ್ಡಿ ಬಾಗಿಲಿನಲ್ಲಿ ರಂಗೋಲಿ ಹಾಕಲು ಸಿದ್ಧಮಾಡಿಕೊಟ್ಟದ್ದು, ನಾನು ಅಲ್ಲಿಟ್ಟ ಸೊಟ್ಟಪಟ್ಟ ರಂಗೋಲಿಯನ್ನೇ ಎಷ್ಟು ಚೆನ್ನಾಗಿದೆ ಎಂದು ಅಜ್ಜಿ ತಾತ ಬಂದವರಿಗೆಲ್ಲಾ ತೋರಿಸಿದ್ದೇ ತೋರಿಸಿದ್ದು ಇನ್ನೂ ನಿನ್ನೆ ಮೊನ್ನೆ ನಡೆದಂತೆ ಅನ್ನಿಸುತ್ತಿದೆ.
ವರುಷಗಳುರುಳಿದಂತೆ ಸಂಕ್ರಾಂತಿಗೆ ಅಜ್ಜಿಯ ಮನೆಗೆ ಹೋಗುವುದು ತಪ್ಪಿತು, ಅಂಗಳದ ರಂಗೋಲಿ ಬಣ್ಣಗಳನ್ನು ಕಂಡು ಬಹಳ ವರ್ಷಗಳಾಯ್ತು, ರಂಗೋಲಿಯ ಮಧ್ಯದಲ್ಲಿ ಚೆಂಡುಹೂ ಹೊತ್ತು ಮೆರೆಯುತ್ತಿದ್ದ ಸಗಣಿಯ ಪಾಂಡವರು ಮರೆಯಾಗಿ ಯಾವುದೋ ಕಾಲವಾಯ್ತು. ಆಗೆಲ್ಲಾ ಕಿರಿಕಿರಿಯೆನ್ನಿಸುತ್ತಿದ್ದ ಎಷ್ಟೋ ಘಟನೆಗಳು ಈಗ ಏಕೋ ಪರಮಾಪ್ತವಾಗಿ ಕಾಡುತ್ತಿವೆ.
ಆದರೆ ಆಗಲೂ ಈಗಲೂ ಸಂಕ್ರಾಂತಿಯಲ್ಲಿ ಬದಲಾಗದೇ ಇರುವುದು ಒಂದೇ, ಎಲ್ಲ ಬಗೆಯಿಂದಲೂ ಹೊಸತನವನ್ನು ತರುವುದು. ಹಳೆಯದನ್ನು ತೊರೆದು ಹೊಸತನಕೆ ತೆರೆದುಕೊಳ್ಳುವುದು. ಹೊಸ ಬೆಳೆ, ಹೊಸ ಬಟ್ಟೆ, ಹೊಸ ಬದುಕು. ಎಲ್ಲ ಹೊಸತು ಹೊಸತು.
ತಮಿಳು ನಾಡು ಮತ್ತು ಆಂಧ್ರದಲ್ಲಿ ಒಂದು ಸಂಪ್ರದಾಯವಿದೆ ಭೋಗಿಯ ದಿನ ಹಳೆಯ ನಿರುಪಯುಕ್ತ ವಸ್ತುಗಳನ್ನೆಲ್ಲ ಒಟ್ಟು ಮಾಡಿ ‘ಭೋಗಿ ಉರಿ’ (ಭೋಗಿ ಮಂಟಲು)ಯಲ್ಲಿ ಹಾಕುವುದು. ತುಂಬಾ ಸಾಂಕೇತಿಕವಾದ ಸಂಪ್ರದಾಯ. ಹಳೆಯ ನಿರುಪಯುಕ್ತ ಹೊರೆಯನ್ನು ಕಳಚಿಟ್ಟು ಮತ್ತೆ ಹೊಸತಿಗೆ ಜಾಗ ಮಾಡಿಕೊಡುವುದು.
ಇಂದು ನಾನೂ ಅದನ್ನೇ ಮಾಡಲು ನಿರ್ಧರಿಸಿರುವೆ. ಹಳೆಯ ನೋವು ನೆನಪುಗಳನ್ನೆಲ್ಲ ಮೂಟೆ ಕಟ್ಟಿ ಮತ್ತೆ ಮೇಲೆದ್ದು ಬರದಂತೆ ತೊರೆದು ಬಿಡುವೆ. ಹೊಸ ಹುರುಪಿನೊಂದಿಗೆ ಬದುಕಿನ ಎಲ್ಲ ಹೊಸತಿಗೆ ತೆರೆದುಕೊಳ್ಳುವೆ.

Thursday, March 25, 2010

ಒಂದು ಹೋಳು ಅಡಿಕೆ॒

ಮೊದಲೇ ಧೂಳು ತುಂಬಿದ ಮಣ್ಣು ಹಾದಿ. ನೆತ್ತಿ ಸುಡುವ ಉರಿ ಬಿಸಿಲು. ಕೈಯಲ್ಲಿ ತರಕಾರಿಯ ಚೀಲ ಹಿಡಿದು ಮನೆಯ ದಾರಿ ಹಿಡಿದವಳಿಗೆ ಅದೇನಾಯ್ತೋ ಗೊತ್ತಿಲ್ಲ, ಕೆಮ್ಮು ಅಲೆಅಲೆಯಾಗಿ ಬರತೊಡಗಿತು. ಏನು ಮಾಡಿದರೂ ಕಡಿಮೆಯಾಗುತ್ತಿಲ್ಲ. ಕೆಮ್ಮಿ ಕೆಮ್ಮಿ ಕಣ್ಣಲ್ಲಿ ನೀರು ಸುರಿಯತೊಡಗಿತು. ನೆತ್ತಿಗೆ ಹತ್ತಿತ್ತೋ ಏನೋ ಉಸಿರೆಳೆದುಕೊಳ್ಳಲೂ ಕಷ್ಟವಾಗುವಂತಹ ಕೆಮ್ಮು. ನಿಲ್ಲಲೂ ಆಗುತ್ತಿಲ್ಲ. ಹತ್ತಿರದಲ್ಲೆಲ್ಲೂ ಮನೆಯಿಲ್ಲ. ಸುತ್ತಮುತ್ತಲಿನವರು ನನ್ನೆಡೆಗೆ ಒಂದು ವಿಚಿತ್ರ ನೋಟವೆಸೆದು ನಡೆದು ಬಿಟ್ಟರು. ಆ ಹೊತ್ತಿಗೆ ಅದೆಲ್ಲಿದ್ದನೋ ಪುಟ್ಟ ಹುಡುಗನೊಬ್ಬ ಬಂದು ಆಂಟಿ ನಿಮ್ಮ ಹತ್ತಿರ ನೀರಿಲ್ವಾ ಕುಡೀರಿ ಕಡಿಮೆಯಾಗುತ್ತೆ ಎಂದ. ಕೆಮ್ಮುತ್ತಲೇ ಇಲ್ಲವೆಂದು ತಲೆಯಾಡಿಸಿದೆ. ತಕ್ಷಣ ಓಡಿ ಹೋದ. ಆ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ.
ಹಾಗೆಯೇ ಹತ್ತು ಹೆಜ್ಜೆ ಹೋದವಳಿಗೆ ನಡೆಯಲೂ ಆಗದೆ ರಸ್ತೆಯ ಬದಿಗೆ ಸರಿದು ನಿಂತು ಬಿಟ್ಟೆ. ನಿಲ್ಲಲು ನೆರಳೂ ಇಲ್ಲ. ಇತ್ತ ಏನು ಮಾಡಿದರೂ ಕೆಮ್ಮು ನಿಲ್ಲುತ್ತಿಲ್ಲ. ಕೆಮ್ಮಿಕೆಮ್ಮಿ ಎದೆನೋವು ಬಂದುಬಿಟ್ಟಿತು. ಅಷ್ಟರಲ್ಲೇ ಓಡುತ್ತಾ ಬಂದ ಆ ಪುಟ್ಟ ಹುಡುಗ. ತೇಕುತ್ತಲೇ “ಆಂಟಿ ಇದನ್ನು ತಿನ್ನಿ ಕಡಿಮೆಯಾಗತ್ತೆ” ಎಂದು ಕೈಚಾಚಿದ. ಅವನ ಪುಟ್ಟ ಕೈಯಲ್ಲಿ ಅಡಿಕೆ ಹೋಳುಗಳಿದ್ದವು. ನಾನು ತೆಗೆದು ಕೊಂಡು ಬಾಯಿಗೆ ಹಾಕಿಕೊಂಡ ಮೇಲೆ “ಇನ್ನ ಕಡಿಮೆಯಾಗತ್ತೆ ಆಂಟಿ. ಕೆಮ್ಮು ಬಂದಾಗ ಅಡಿಕೆ ಬಾಯಿಗೆ ಹಾಕ್ಕೊಂಡ್ರೆ ಕಡಿಮೆಯಾಗತ್ತೆ ಅಂತ ಅಜ್ಜಿ ಹೇಳಿದ್ಲು. ಆದ್ರೆ ಒಂದ್ಸಾರಿ ಡಾಕ್ಟ್ರಿಗೆ ತೋರಿಸಿ..” ಎಂದವನೇ ನನ್ನ ಉತ್ತರಕ್ಕೂ ಕಾಯದೇ ಹೊರಟುಬಿಟ್ಟ.
ಆ ಪುಟ್ಟ ಹುಡುಗನಿಗೆ ಒಂದು ಥ್ಯಾಂಕ್ಸ್ ಹೇಳಲೂ ಆಗಲಿಲ್ಲವಲ್ಲ ಎನ್ನುವ ಕೊರಗು ಇಂದಿಗೂ ಕಾಡುತ್ತಿದೆ. “ಪುಟ್ಟಾ ತುಂಬ ತುಂಬ ಥ್ಯಾಂಕ್ಸ್. ಬರಿ ಒಂದು ಅಡಿಕೆ ಹೋಳಿಗಾಗಿ ಅಲ್ಲ. ನೀ ಮೆರೆದ ಮಾನವತ್ವಕ್ಕಾಗಿ.”
ಸಂಬಂಧಗಳೆಲ್ಲ ತೆಳುವಾಗಿ, ಪ್ರತಿ ವಿಷಯವೂ ನಾನು, ನನ್ನಿಂದ, ನನಗಾಗಿ, ನನಗೇನು ಎಂದು ‘ನಾನು’ ಸುತ್ತಲೇ ಸುತ್ತುವ ಕಾಲಘಟ್ಟದಲ್ಲಿ, ಪುಟ್ಟ ಅಡಿಕೆ ಹೋಳಿನಂತಹ ಘಟನೆಗಳು ನಮ್ಮ ಆಶಾವಾದವನ್ನು ಚಿಗುರಿಸುತ್ತವೆ.

vismaya

ಗ್ರಹಣ ಇಷ್ಟು ಅಂದವಾಗಿರಬಹುದೆಂದು ಅಂದುಕೊಂಡೇ ಇರಲಿಲ್ಲ. ಶತಮಾನದ ಸುದೀರ್ಘ ಗ್ರಹಣ ಎಂದೇ ಎಲ್ಲರ ಗಮನ ಸೆಳೆದಿದ್ದ ಇದರ ಬಗ್ಗೆ ಅನೇಕರಿಗೆ ಆತಂಕ, ಬಹುತೇಕರಿಗೆ ಕುತೂಹಲ.
ಗ್ರಹಣ ನೋಡ ಹೊರಟವರಿಗೆ ಎದುರಾದದ್ದು ಖಾಲಿ ಖಾಲಿ ರಸ್ತೆ, ಮುಚ್ಚಿದ ಅಂಗಡಿ ಮುಂಗಟ್ಟುಗಳು, ಅರ್ಧಬಾಗಿಲು ತೆರೆದಿದ್ದ ಹೊಟೇಲುಗಳು.
ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆಗಾಗಿ ಅನುಕೂಲ ಮಾಡಿಕೊಟ್ಟಿದ್ದ ಬಾಹ್ಯಾಕಾಶ ವೀಕ್ಷಣಾ ಸಂಸ್ಥೆಯನ್ನ ತಲುಪಿದ್ದೇ ತಡ ಮತ್ತೊಂದು ಮಾಯಾಲೋಕವೇ ತೆರೆದುಕೊಂಡಿತ್ತು.
ಗ್ರಹಣವನ್ನು ನೋಡಲು ಎರಡು ಮೂರು ವರ್ಷದ ಮಕ್ಕಳನ್ನೂ ಕರೆತಂದಿದ್ದ ತಾಯಂದಿರಿಂದ ಹಿಡಿದು, ಎಂಭತ್ತರ ಹರೆಯದವರವರೆಗಿನ ಎಲ್ಲ ವಯೋಮಾನದವರೂ ಈ ಕೌತುಕ ನೋಡಲು ನೆರೆದಿದ್ದರು.
ಗ್ರಹಣ ನೋಡಲು ಅವರಿವರಿಂದ ಚಾಳೀಸು ಪಡೆದು ನೋಡಿದ್ದಾಯ್ತು. ಹಾಗೆಯೇ ಎಲ್ಲರಿಗೂ ಬರಿಗಣ್ಣಿನಲ್ಲಿ ನೋಡಲು ಸಾಧ್ಯವಾಗುವಂತೆ ಗ್ರಹಣದ ಪ್ರತಿಫಲನದ ವ್ಯವಸ್ಥೆ ಮಾಡಿದ್ದರು ಸಂಸ್ಥೆಯವರು ಅದನ್ನೂ ನಿರುಕಿಸಿದ್ದಾಯ್ತು. ಇಷ್ಟಕ್ಕೇ ಸಂಭ್ರಮಿಸುತ್ತಿದ್ದ ನಮಗೆ ಪಕ್ಕದಲ್ಲಿದ್ದ ಹಲವರು ಬೋರ್ಡ್ ಒಂದರ ಮೇಲೆ ಬಿಳಿ ಕಾಗದ ಹಿಡಿದು ಏನನ್ನೋ ನೋಡುತ್ತಿದ್ದುದು ಕಾಣಿಸಿತು. ಹತ್ತಿರ ಹೋಗಿ ನೋಡಿದರೆ ಅಲ್ಲಿಯೂ ಹಾಳೆಯ ಮೇಲೆ ಸೂಜಿ ಮೊನೆಯಿಂದ ಹಾಕಲಾಗಿದ್ದ ಪುಟ್ಟ ತೂತಿನಿಂದ ಹಾದು ಬಂದ ಕಿರಣವೊಂದು ಸೂರ್ಯನ ಗ್ರಹಣದ ಬಿಂಬವನ್ನು ಹೊತ್ತು ತಂದಿತ್ತು.
ಅಲ್ಲಿಗೆ ಬಂದ ಸ್ವಯಂ ಸೇವಕಿ ನೀವೀಗ ಮಾಡುತ್ತಿರುವ ಪ್ರಯೋಗವನ್ನು ಪ್ರಕೃತಿಯೇ ಮಾಡಿದೆ ಬಂದು ನೋಡಿ ಎಂದದ್ದೇ ಅವಳ ಹಿಂದೆ ಹೊರಟೆವು. ಅಲ್ಲಿ ಹೋದಾಗ ಕಂಡದ್ದು ಮಾತ್ರ ಪ್ರಕೃತಿಯ ಕೌತುಕ. ಮರದ ದಟ್ಟ ನೆರಳನ್ನು ಸೀಳಿಕೊಂಡು ಬಂದ ಪ್ರತಿ ಕಿರಣವೂ ಗ್ರಹಣಗ್ರಸ್ತ ಸೂರ‍್ಯನ ಬಿಂಬವನ್ನು ಮೂಡಿಸಿತ್ತು. ವಾಹ್ ಅದೊಂದು ಅದ್ಭುತ ನೋಟ.
ಅಲ್ಲಿಂದ ತಿರುಗಿ ಹೊರಟಾಗ ದಾರಿಯುದ್ದಕ್ಕೂ ಇದ್ದ ಮರದ ನೆರಳನ್ನು ಸೀಳಿಕೊಂಡು ಬಂದ ಕಿರಣಗಳು ಗ್ರಹಣಗ್ರಸ್ತ ಸೂರ‍್ಯನ ಬಿಂಬವನ್ನು ಮೂಡಿಸಿದ್ದವು.
ಇಂತಹ ಸುಂದರ ನೋಟವನ್ನು ನೋಡುವ ಅವಕಾಶವನ್ನು ಕಳೆದು ಕೊಂಡು ಮನೆಯಲ್ಲಿ ಅಡಗಿ ಕುಳಿತಿರುವಿರಲ್ಲಾ ಎಂದು ಎಲ್ಲರನ್ನೂ ನೋಡಿ ನಗುತ್ತಿರುವಂತೆ ಭಾಸವಾಗುತ್ತಿತ್ತು.

Wednesday, March 24, 2010

ಹಾದಿ


ಹತ್ತಿರದಲ್ಲೆಲ್ಲೋ ಹೋಗ ಬೇಕಿತ್ತು ಆಟೋಗಾಗಿ ಕಾಯುತ್ತಿದ್ದೆವು ಸಾಕಷ್ಟು ಖಾಲಿ ಆಟೋಗಳು ಬರುತ್ತಿದ್ದರೂ ಕೂಡಾ ನಾವು ಕೇಳಿದ ಪ್ರತಿ ಆಟೋ ಬರುವುದಿಲ್ಲವೆಂದೇ ಹೇಳುತ್ತಿತ್ತು. ಹೀಗೇಕೆ ಎಂದು ಯೋಚಿಸುವಂತಾಯ್ತು. ಆದರೆ ಅದೇ ರೋಡಿನ ಮತ್ತೊಂದು ಬದಿಗೆ ಹೋದಾಗ ನಾವು ಕೇಳಿದ ಮೊದಲ ಆಟೋದವನೇ ಹೋಗ ಬೇಕಾದ ಸ್ಥಳಕ್ಕೆ ಬರಲೊಪ್ಪಿದ. ಇದು ಮ್ಯಾನೇಜ್ಮೆಂಟ್ನ ಮೊದಲ ಪಾಠ. ಗುರಿಯನ್ನು ತಲುಪಲಾಗದಿದ್ದರೆ ದೋಷ ಗುರಿಯದ್ದಲ್ಲ ನಾವು ಹಿಡಿದ ಹಾದಿಯದ್ದು.
ಜೀವನವೂ ಹೀಗೆಯೇ ಅಲ್ಲಿ ಹಲವು ಬಾರಿ ನಿರಾಕರಣೆಗಳನ್ನು, ಸಮಸ್ಯೆಗಳನ್ನು ಎದುರಿಸ ಬೇಕಾಗಿ ಬರುತ್ತದೆ. ನನಗೇಕೆ ಹೀಗೆ ಎಂದು ಎದೆಗುಂದುವಂತಾಗುತ್ತದೆ. ಈ ಹಂತದಲ್ಲೇ ಸ್ವಾನುಕಂಪ ಇಣುಕಿನೋಡುತ್ತದೆ. ಒಂದು ಬಾರಿ ಇದರ ಹಿಡಿತಕ್ಕೆ ಬಂದೆವೆಂದೆರೆ ಮುಗಿಯಿತು ನಮ್ಮ ಎದುರಿಗಿದ್ದ ಹೆದ್ದಾರಿಯೂ ನಮಗೆ ಕಾಣಿಸುವುದಿಲ್ಲ.
ಏನು ಮಾಡಿದರೂ ಸರಿಯಾದ ಫಲಿತಾಂಶ ದೊರೆಯುತ್ತಿಲ್ಲ ಎನಿಸಿದಾಗ ನಾವು ಹಿಡಿದ ಹಾದಿ ನಮ್ಮನ್ನು ನಮ್ಮ ಗುರಿಯೆಡೆಗೆ ನಡೆಸುತ್ತದೆಯೇ ಎಂಬುದನ್ನು ಒಂದು ಬಾರಿ ಅವಲೋಕಿಸಿಕೊಳ್ಳಬೇಕು. ಗುರಿ ಸ್ಪಷ್ಟವಿದ್ದಾಗಲೇ ಗುರಿ ಸಾಧಿಸುವ ಹಾದಿ ಸಿಗುವುದು ಸುಗಮವಾಗುತ್ತದೆ.
ಎಲ್ಲರ ಬದುಕಿನಲ್ಲೂ ಒಂದೇ ಬಗೆಯ ಘಟನೆಗಳು ನಡೆಯುತ್ತವೆ. ಆದರೆ ನಾವು ಅದಕ್ಕೆ ನೀಡುವ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ. ಅದು ಘಟನೆಯ ಪರಿಣಾಮವನ್ನು ನಿರ್ಧರಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರನ್ನು ರೈಲು ಗಾಡಿಯಿಂದ ಹೊರದಬ್ಬಿದಾಗ ಅವರು ಆ ಘಟನೆಗೆ ಪ್ರತಿಕ್ರಿಯಿಸಿದ ರೀತಿಯಿಂದಲೇ ಆ ಘಟನೆ ಚರಿತಾರ್ಥವಾಯಿತು. ವರ್ಣವಿಬೇಧ ನೀತಿಯ ವಿರುದ್ಧದ ಹೋರಾಟಕ್ಕೆ ನಾಂದಿಯಾಯಿತು.
ಪ್ರತಿಯೊಬ್ಬರ ಜೀವನದಲ್ಲಿ ನಡೆಯ ಬಹುದಾದ ಅತಿ ಸಾಮಾನ್ಯ ಘಟನೆ, ಗಾಂಧೀಜಿಯವರು ಪ್ರತಿಕ್ರಿಯಿಸಿದ ರೀತಿಯಿಂದಾಗಿ ಚರಿತಾರ್ಥವಾಯಿತು.
picture source internet: wallpapermania.freehostia.com/windows.html

ಹಲವು ದಿನಗಳ ಕೆಳಗೆ ಅತ್ಯಂತ ಆಕರ್ಷಕ ಸ್ಕೂಟಿ ಮಾದರಿಯ ವಾಹನವೊಂದನ್ನು ನೋಡಿದೆ. ತುಂಬ ಚೆನ್ನಾಗಿತ್ತು. ಯುವತಿಯೊಬ್ಬಳು ಅತ್ಯಂತ ಸರಾಗವಾಗಿ ಅದನ್ನು ನಡೆಸಿಕೊಂಡು ಸುಯ್ಯೆಂದು ಹೊರಟು ಬಿಟ್ಟಳು. ಹೆಚ್ಚು ಗಮನಿಸಲು ಆಗಲೇ ಇಲ್ಲ. ಆದರೆ ಒಂದು ಅಂಶ ಮಾತ್ರ ನನ್ನ ಗಮನ ಸೆಳೆಯಿತು. ಅದೆಂದೆರೆ ಅದಕ್ಕೆ ಹೆಡ್ಲೈಟ್ ಇಲ್ಲದೇ ಇದ್ದದ್ದು. ದಾರಿಯಲ್ಲಿ ನಡೆದು ಬರುತ್ತಿರುವಾಗಲೂ ಅದು ನನ್ನನ್ನು ಕಾಡುತ್ತಲೇ ಇತ್ತು. ಅರೆ ಹೆಡ್ಲೈಟಿಲ್ಲದ ಗಾಡಿಯಾ ಹೇಗೆ ಸಾಧ್ಯ. ಅಥವಾ ಹ್ಯಾಂಡಲ್ ಬಳಿ ಹೆಡ್ಲೈಟ್ಗೆ ಕವರ್ ಹಾಕಲಾಗಿದೆಯಾ ಹೇಗೆ? ತೆರೆ ಸರಿದಂತೆ ಅದು ತನ್ನಷ್ಟಕ್ಕೆ ತಾನೇ ಸರಿಯುತ್ತದಾ? ರಾತ್ರಿಯಾದರೆ ಹೇಗೆ ಓಡಿಸುತ್ತಾರೆ. ಹೀಗೆ ಹತ್ತಾರು ಕೋನಗಳಲ್ಲಿ ಆಲೋಚಿಸಿದರೂ ನನ್ನ ಪ್ರಶ್ನೆಗೆ ಉತ್ತರ ಹೊಳೆಯಲೇ ಇಲ್ಲ. ನನ್ನ ಮುಂದೆ ಅಂತಹುದ್ದೇ ಮತ್ತೊಂದು ವಾಹನ ಹಾದು ಹೋದಾಗಲೂ ನನಗೆ ಹೆಡ್ಲೈಟ್ ಕಾಣಿಸಲಿಲ್ಲ. ಆ ಹೆಡ್ಲೈಟ್ ನನ್ನನ್ನು ಇನ್ನಿಲ್ಲದಂತೆ ಕಾಡತೊಡಗಿತು. ಆಫೀಸಿಗೆ ಹೋದ ತಕ್ಷಣ ಅದರ ಬಗ್ಗೆ ಗೂಗಲ್ ಮಾಡಬೇಕೆಂದವಳಿಗೆ ಎಡೆಬಿಡದ ಕೆಲಸದ ನಡುವೆ ಮರೆತೇ ಹೋಯ್ತು.
ಇನ್ನೊಂದು ದಿನ ನಡೆಯುತ್ತಾ ಹೋಗುತ್ತಿದ್ದವಳ ಕಣ್ಣು ಹಾದು ಹೋದ ಆ ಸ್ಕೂಟಿ ಮಾದರಿಯ ವಾಹನದ ಮೇಲೆ ಅಯಾಚಿತವಾಗಿ ಬಿತ್ತು. ಹಾಗೆ ಬಿದ್ದಾಗಲೇ ನನಗೆ ಅಲ್ಲಿ ಹ್ಯಾಂಡಲ್ನ ಕೆಳಭಾಗದ ಗಾಲಿಯ ಮೇಲ್ಭಾಗದ ಮೇಲೆ ಥಳಥಳನೇ ಹೊಳೆಯುತ್ತಿದ್ದ ದೀಪ ಕಣ್ಣಿಗೆ ಬಿತ್ತು. ಅರೆ ಇದೇ ಅಲ್ಲವಾ ನನ್ನನ್ನು ಕಾಡುತ್ತಿದ್ದ ದೀಪ ಎಂದು ಅಚ್ಚರಿಯಾಯ್ತು.
ಸ್ಕೂಟಿ, ಕೆನೆಟಿಕ್ ಹೊಂಡಾಗಳನ್ನೇ ನೋಡಿ ಅಭ್ಯಾಸವಾಗಿದ್ದ ನನ್ನ ಕಣ್ಣು ಹ್ಯಾಂಡಲ್ ಬಳಿಯೇ ಹೆಡ್ಲೈಟನ್ನು ಹುಡುಕಿ ಸುಮ್ಮನಾಗಿ ಬಿಟ್ಟಿತ್ತು. ಅಷ್ಟೇ ಅಲ್ಲದೇ ಅರೆ ಈ ಗಾಡಿಗೆ ದೀಪವೇ ಇಲ್ಲವಲ್ಲ ಎನ್ನುವ ಭಾವವನ್ನೂ ಮೆದುಳಿಗೆ ಹೊತ್ತು ಹಾಕಿತ್ತು. ದೀಪವನ್ನು ಹುಡುಕುವ ತವಕ ಹುಟ್ಟಿತು. ಕಳೆದದ್ದನ್ನು ಹುಡುಕುವ ಆತುರದಲ್ಲಿ ಮತ್ತೆ ಮತ್ತೆ ಅದೇ ಸ್ಥಳದಲ್ಲಿ ಹುಡುಕಿ ಸುಮ್ಮನಾಗಿಬಿಟ್ಟಿತು. ಆದರೆ ಇನ್ನೊಂದು ಬಾರಿ ನೋಡಿದಾಗ ಯಾವುದೇ ಧಾವಂತವಿರಲಿಲ್ಲ. ಅಲ್ಲದೇ ಕಣ್ಣಿಗೂ ಪೂರ್ವಗ್ರಹಗಳಿರಲಿಲ್ಲ. ಹಾಗಾಗಿ ಅಲ್ಲಿಯೇ ಇದ್ದ ದೀಪ ಕಣ್ಣಿಗೆ ಬಿತ್ತು.
ಈ ಪುಟ್ಟ ಘಟನೆ ನನಗೆ ಜೀವನದ ಅತಿದೊಡ್ಡ ಪಾಠವನ್ನೇ ಕಲಿಸಿಕೊಟ್ಟಿತು. ನಮ್ಮ ದೇಹ ಮತ್ತು ಮನಸ್ಸುಗಳ ನಡವಳಿಕೆಯಂತೆ ನಮ್ಮ ಯೋಚನೆಗಳೂ ಕೂಡ ಒಂದೇ ಬಗೆಯ ಯೋಚನಾ ಧಾಟಿಗೆ ಒಗ್ಗಿಕೊಂಡು ಬಿಡುತ್ತವೆ. ಹಾಗಾಗಿ ಯಾವುದೇ ಸಮಸ್ಯೆ ಎದುರಾದಾಗಲೂ ಒಂದೇ ಬಗೆಯ ಯಾಂತ್ರಿಕ, ಸಿದ್ಧ ಉತ್ತರ ಮತ್ತು ಪ್ರತಿಕ್ರಿಯೆಗಳನ್ನೇ ನೀಡುತ್ತವೆ. ಅದರಲ್ಲಿರುವ ಹೊಸ ಉತ್ತರಗಳು ಮತ್ತು ಸಾಧ್ಯತೆಗಳು ಹೊಳಹುಗಳನ್ನು ಗುರುತಿಸಲಾಗುವುದೇ ಇಲ್ಲ. ಹೊಸದನ್ನೇನಾದರೂ ಮಾಡಬೇಕೆಂದರೂ, ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಬೇಕೆಂದರೂ ಕೂಡ ಈ ಸಿದ್ಧ ಮಾದರಿಯ ಆಲೋಚನೆಯ ಸುಳಿಯನ್ನು ಮೆಟ್ಟಿ ಬರಬೇಕು. ಹಾಂ ಅದೇ ಔಟ್ ಆಫ್ ದ ಬಾಕ್ಸ್ ಥಿಂಕಿಂಗ್ ನಮ್ಮದಾಗಬೇಕು. ಹಾಗಾದಾಗಲೇ ಹೊಸ ಅವಕಾಶಗಳು ಕಾಣುತ್ತವೆ ಮತ್ತು ಯಶಸ್ಸು ನಮ್ಮದಾಗುತ್ತದೆ.

Monday, March 22, 2010

baduku


ಬದುಕು ಅಧ್ಬುತವಾಗಿ ಸಾಗುತ್ತಿದೆ. ಜಗತ್ತಿನೆಲ್ಲ ಸೌಖ್ಯವೂ ನನ್ನಡೆಯಿದೆ ಎಂದುಕೊಂಡು ತುಸು ರಿಲಾಕ್ಸ್ ಆದಾಗಲೇ ಬದುಕು ಅತ್ಯಂತ ಅಚ್ಚರಿಯ ಆಘಾತಗಳನ್ನು ನೀಡುತ್ತದೆ. ಅದು ಎತ್ತಿ ಒಗೆಯುವ ರಭಸಕ್ಕೆ ಬದುಕು ಛಿದ್ರವಾಗುತ್ತದೆ. ಈ ಹಂತದಲ್ಲಿ ದುಸ್ತರವೆನ್ನಿಸುವ ಇದೇ ಬದುಕು ಹತ್ತು ಹಲವು ಹಾದಿಗಳನ್ನು ತೋರಿಸಿ ಕೈಹಿಡಿದೆತ್ತಿ, ತುಣುಕುಗಳನ್ನು ಜೋಡಿಸಿ ಮತ್ತೆ ಹೊಸ ಬದುಕನ್ನು ಕಟ್ಟುವ ಚೈತನ್ಯವನ್ನೂ ಮೊಗೆಮೊಗೆದು ಕೊಡುವ ಕರುನಾಳುವಾಗುತ್ತದೆ. ಇಲ್ಲಿ ನಮಲ್ಲಿರಬೇಕಾದದ್ದು ಒಂದೆ ಅಪಾರ ತಾಳ್ಮೆ, ಬೂದಿಯಿಂದಲೂ ಎದ್ದುಬರುವ ಫೀನಿಕ್ಸ್‌ನ ಬದುಕು ಕಟ್ಟಿಕೊಳ್ಳುವ ಛಲ ಮತ್ತು ಅಪಾರ ಜೀವನ ಪ್ರಿತಿ.
 
Designed by Lena