ಎಮಿಲಿ ಡಿಕಿನ್ಸನ್ (1830-1886), ನನ್ನನ್ನು ಬಹುವಾಗಿ ಕಾಡುವ ಕವಯತ್ರಿಯರಲ್ಲೊಬ್ಬಳು. ೧೯ನೇ ಶತಮಾನದ ಈ ಅಮೆರಿಕನ್ ಕವಯತ್ರಿಯ ಕವನಗಳು ಹೆಸರಾದದ್ದು ಆಕೆ ಕವನಗಳಿಗೆ ಬಳಸಿದ ವಿಶಿಷ್ಟ ವಸ್ತು ಮತ್ತು ವಿಭಿನ್ನ ಪ್ರಾಸಗಳಿಂದಾಗಿ. ನೂರಾರು ಕವನಗಳನ್ನು ಬರೆದಿರುವ ಈಕೆ ೨೧ನೇ ಶತಮಾನದ ಕವಿಗಳಿಗೂ ಸ್ಫೂರ್ತಿಯ ಸೆಲೆಯಾಗಿದ್ದಾಳೆ. “Because I Could Not Stop for Death”, “Heart, we will forget him!”, “I'm Nobody! Who are You?”, and “Wild Nights! Wild Nights!”; ಇವು ಆಕೆಯ ಅತ್ಯಂತ ಪ್ರಸಿದ್ಧ ಕವನಗಳಲ್ಲಿ ಕೆಲವು ಮಾತ್ರ. ತೀವ್ರ ಸಂವೇದನಾಶೀಲೆಯಾಗಿದ್ದ ಎಮಿಲಿ ತನ್ನ ಅನೇಕ ಕವನಗಳಲ್ಲಿ ಸಾವನ್ನು ಗೆಳೆಯನಂತೆ ಮನೆಗೆ ಭೇಟಿ ನೀಡುವ ಪರಮಾಪ್ತನಂತೆ ಚಿತ್ರಿಸುವ ಪರಿ ಮನಕ್ಕೆ ತಟ್ಟುತ್ತದೆ. ನನ್ನನ್ನುಗ ಬಹುವಾಗಿ ಕಾಡಿದ ಮನಕ್ಕೆ ಅತ್ಯಂತ ಆಪ್ತವಾದ “Because I Could Not Stop for Death”ನ ಅನುವಾದ ಇಲ್ಲಿದೆ.
ಸಾವಿಗಾಗಿ ನಿಲ್ಲುವವಳಲ್ಲ...
ಸಾವಿಗಾಗಿ ಕಾಯಲು ಪುರಸೊತ್ತಿಲ್ಲ-
ಹಾಗಾಗಿ ಅವನೇ ನನಗಾಗಿ ನಿಂತ-
ಆ ಗಾಡಿಯಲ್ಲಿದ್ದದ್ದು ನಾವು
ಮತ್ತು ಅಮರತ್ವ.
ಸಾವಕಾಶವಾಗಿ ಸಾಗಿತು ಬಂಡಿ- ಆತನಿಗೆ ಆತುರವೆಂಬುದೇ ಇರಲಿಲ್ಲ
ಮತ್ತು ನಾನು ನನ್ನ ಕೆಲಸ, ಬಿಡುವು
ಬದಿಗೆತ್ತಿ ಇಟ್ಟಿದ್ದೆ, ಆತನ ಸಭ್ಯತೆಗಾಗಿ.
ಶಾಲೆಯನ್ನು ದಾಟಿ ಬಂದೆವು ಮಕ್ಕಳೆಲ್ಲ
ಬಿಡುವಿನಲ್ಲಿ ಆಟವಾಡುತ್ತಿದ್ದರು ಬಯಲಿನಲ್ಲಿ-
ಧಾನ್ಯದಿಂದ ತೂಗುತ್ತಿದ್ದ ಹೊಲಗಳನ್ನೆಲ್ಲ ದಾಟಿ ಬಂದೆವು-
ಕಂದುತ್ತಿದ್ದ ಸೂರ್ಯನನ್ನು ಹಿಂದಿಕ್ಕಿ ಬಂದೆವು-
ಇಲ್ಲ ಆತನೇ ನಮ್ಮನ್ನು ದಾಟಿ ಹೋದ-
ಮಂಜಿನ ಹನಿಗಳು ಉಲುಕುತ್ತಿದ್ದವು ಮತ್ತು ಛಳಿ-
ನವಿರಾಗಿತ್ತು, ನನ್ನ ಗೌನು-
ನನ್ನ ಮಫ್ಲರ್- ಮುಖಪರದೆ ಮಾತ್ರ-
ಮನೆಯೊಂದರ ಮುಂದೆ ನಿಂತೆವೊಂದರೆ ಗಳಿಗೆ
ಭೂಮಿ ತುಸು ಉಬ್ಬಿದಂತಿತ್ತು-
ಛಾವಣಿ ಮಸುಕಾಗಿ ಕಾಣುತ್ತಿತ್ತು
ಭೂಮಿಯಲ್ಲಿನ ಕಾರ್ನೀಸಿನಂತೆ-
ಅಂದಿನಿಂದ ಶತಮಾನಗಳೇ ಕಳೆದರೂ- ಕೂಡ
ಅನಿಸುತ್ತಿದೆ ದಿನವೊಂದರಂತೆ
ಅಮರತ್ವದೆಡೆಗೆ ನಡೆದು ಬಂದಂತೆ.
Subscribe to:
Post Comments (Atom)
Really nice translation...
ReplyDelete