Sunday, June 7, 2015

Silenced forever for Unsilencing
ಬರೆಯ ಹೊರಟಿದ್ದು ಬರಿ ಒಂದೆರಡು ಸಾಲು... ಈ ತಾಯಿ ಮಗಳ ಜೋಡಿಯ ಬಗ್ಗೆ... ಊಹೂಂ ಅಲ್ಲಿಗದು ನಿಲ್ಲಲೇ ಇಲ್ಲ... ನನ್ನನ್ನು ಅತ್ಯಂತ ತೀವ್ರವಾಗಿ ತಟ್ಟಿದ, ಮಾಡುತ್ತಿದ್ದ ಕೆಲಸಗಳನ್ನೆಲ್ಲಾ ಬದಿಗಿಟ್ಟು ಮಾಡಿಸಿಕೊಂಡ ಬರೆಹ ಇದು... ಬಿಬಿಸಿಯಲ್ಲಿನ ಸಂದರ್ಶನ ಕೇಳಿದ ಮೇಲೆ ಆ ತಾಯಿಯ ಮಾತುಗಳ ಆಯ್ದಭಾಗಗಳನ್ನು ನೇಯ್ದಿದ್ದು...
ಸುಮ್ಮನಾಗುವ ಪ್ರಮೇಯವೇ ಇಲ್ಲ ಉಸಿರೇ ನಿಂತರೂ.. ಸಬೀನ್‌ ಮೊಹಮದ್‌..  
ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕಿ, ತಮಗನ್ನಿಸಿದ್ದನ್ನು ಮುಕ್ತವಾಗಿ ಹಂಚಿಕೊಳ್ಳಲು ತಮ್ಮ ದೃಷ್ಟಿಕೋನಗಳನ್ನು ಪ್ರತಿಪಾದಿಸಲು ಕೆಫೆಯೊಂದನ್ನು ತೆರೆದಿದ್ದರು ಸಬೀನ್‌... ಅಂಥದ್ದೇ ಒಂದು ಕಾರ್ಯಕ್ರಮ ಮುಗಿಸಿ ಮನೆಗೆ ಮರಳುತ್ತಿದ್ದಾಗ ಮೂಲಭೂತವಾದಿಗಳ ಗುಂಡಿಗೆ ಬಲಿಯಾದರು.. ಅದಾಗಿ ಆರೇಳು ವಾರಗಳೇ ಕಳೆದಿದೆ. ಆದರೆ ಆಕೆಯ ಛವಿಯಿನ್ನೂ ಮನದಿಂದ ಮಾಸಿಲ್ಲ...
ನಾನು ಆಕೆಯ ಕೆಫೆಗೆ ಹೋಗಿ ಅದೆಷ್ಟೋ ದಿನವಾಗಿತ್ತು. ಆದರೆ ಅಂದು ಮಾತ್ರ ನಾನು ಆಕೆಯ ಜತೆಗಿರಲೇ ಬೇಕು ಎಂದು ತೀವ್ರವಾಗಿ ಅನ್ನಿಸಿತ್ತು. ನಾನಿನನ್ನೊಂದಿಗಿದ್ದೇನೆ ಎಂದು ಹೇಳಬೇಕೆನಿಸಿತ್ತು . ಆಕೆಯೊಂದಿಗೆ ಹೊರಟೆ,”
ಕಾರ್ಯಕ್ರಮ ಮುಗಿಸಿ ಮನೆಗೆ ಹೊರಟಿದ್ದೆವು, ಸಬೀನ್‌ ತಾನೇ ಡ್ರೈವ್‌ ಮಾಡುತ್ತಿದ್ದಳು, ಪಕ್ಕದಲ್ಲಿನ ನಾನು. ಅದೂ ಇದೂ ಮಾತನಾಡುತ್ತಿದ್ದೆವು. ಟ್ರಾಫಿಕ್‌ ಸಿಗ್ನಲ್‌ ಬಂತು ಕಾರು ನಿಂತಿತ್ತು. ಸಬೀನ್‌ ಕಡೆ ಬೈಕ್‌ ಮೇಲೇರಿದ್ದವರು ತೀರಾಹತ್ತಿರಕ್ಕೆ ಬಂದಿದ್ದರು. ಕಣ್ಣುಗಳು ಸಬೀನ್‌ಳನ್ನೇ ಕೆಕ್ಕರಿಸಿ ನೋಡುತ್ತಿದ್ದವು. ಸಬೀನ್‌ ನೋಡಲ್ಲಿ, ಅವರಿಗೇನು ಬೇಕು ಎಂದೆ. ಹ್ಯಾಂಡ್‌ಬ್ಯಾಗ್‌ ಫೋನ್‌ ಇನ್ನೇನನ್ನೋ ಕಿತ್ತುಕೊಳ್ಳಲು ಬಂದಿರಬೇಕು ಎಂದು ಕೊಂಡೆ. ಮಾತು ಮುಗಿಯುವುದರೊಳಗೇ ಗುಂಡು ಸಿಡಿದ ಸದ್ದು, ಗಾಜು ಒಡೆದದ್ದು ಸಬೀನ್‌ ಗೋಣುಚೆಲ್ಲಿದ್ದು, ಅವರು ಓಡಿದ್ದು ಎಲ್ಲವೂ ಮುಗಿದುಹೋಗಿತ್ತು. ನನಗೆ ಎರಡು, ಆಕೆಗೆ ಐದು ಗುಂಡು ಬಿದ್ದಿತ್ತು.
ಸಬೀನ್‌ ಕೇಳಿಸುತ್ತಿದೆಯಾ ಮಗಳೇ? ಏನಾದರೂ ಮಾತಾಡು.. ನಿನ್ನನ್ನು ಆಸ್ಪತ್ರೆಗೆ ಕರೆದೊಯ್ಯುತ್ತೇವೆ...” ಬಡಬಡಿಸುತ್ತಲೇ ಇದ್ದೆ.
ಅಲ್ಲಿನ ಜನ ನನ್ನನ್ನು ಆಸ್ಪತ್ರೆಗೆ ಕರೆದೊಯ್ದರುಪ್ರಥಮ ಚಿಕಿತ್ಸೆಯ ಬಳಿಕ ಮತ್ತೊಂದು ದೊಡ್ಡಾಸ್ಪತ್ರೆಗೆ ಕರೆದೊಯ್ದರು. ಸಬೀನ್‌ಳನ್ನು ಸ್ಟ್ರೆಚರ್‌ನಲ್ಲಿ ಮತ್ತೆಲ್ಲೋ ಕರೆದೊಯ್ದರು ಶವಾಗಾರಕ್ಕೇ ಇರಬೇಕು. ಸಬೀನ್‌ ಇನ್ನಿಲ್ಲ ಎಂಬುದು ನನ್ನ ಕಣ್ಣು, ಕಿವಿ, ನನ್ನಾತ್ಮಕ್ಕೂ ಗೊತ್ತಿತ್ತು. ಆದರೂ ಅದು ಮನಸ್ಸಿನಾಳಕ್ಕಿಳಿದಿರಲಿಲ್ಲ. ಆಸ್ಪತ್ರೆಯಲ್ಲಿದ್ದವರನೆಲ್ಲಾ ಪದೇಪದೇ ಕೇಳುತ್ತಿದ್ದೆ. ನನಗೆ ಗೊತ್ತಿದ್ದದ್ದನ್ನೇ ಖಚಿತಪಡಿಸಿಕೊಳ್ಳಬೇಕಿತ್ತಷ್ಟೆ. ಆದರೂ ಯಾರೂ ಏನನ್ನೂ ಹೇಳುತ್ತಿರಲಿಲ್ಲ. ನೇರವಾಗಿಯೇ ಕೇಳಿದೆ. ಊಹೂಂ ತಾಯಿಯೊಬ್ಬಳಿಗೆ ಉತ್ತರಿಸುವ ಸ್ಥೈರ್ಯ ಇರಲಿಲ್ಲವೇನೋ. ದೂರದಲ್ಲಿ ನರ್ಸ್‌ಒಬ್ಬಳು ಶಿ ನೊಸ್‌ ಇಟ್‌...”ಎನ್ನುತ್ತಿದ್ದದ್ದು ಕಿವಿಗೆ ಬಿತ್ತು.
ಸಬೀನ್‌ ಅಂತ್ಯಸಂಸ್ಕಾರ ಬಂದವರೆಷ್ಟೋ ಲೆಕ್ಕವಿಲ್ಲ. ಸಬೀನ್‌ ನನಗೆ ಸೆಲೆಬ್ರಿಟಿಯಾಗಿರಲೇಇಲ್ಲ. ನನ್ನಾತ್ಮದ ತುಣುಕು ಆಕೆ. ಆಕೆಗಾಗಿ ಇಷ್ಟೊಂದು ಮಿಡಿಯುವ ಮನಗಳಿವೆಯೇ?
ಸಬೀನಾ ಅರ್ಥವಾಗಬೇಕಿದ್ದರೆ ನನ್ನ ಬಾಲ್ಯವನ್ನುನಿಮಗೆ ಹೇಳಬೇಕು. ನಾನು ಹುಟ್ಟಿದ್ದು ಕೋಲ್ಕೊತಾದಲ್ಲಿ. ಐದರ ಎಳೆವಯದಲ್ಲೇ ಢಾಕಾ ಅಂದಿನ ಪೂರ್ವ ಪಾಕಿಸ್ತಾನ ಇಂದಿನ ಬಾಂಗ್ಲಾದೇಶಕ್ಕೆ ವಲಸೆ ಹೋದೆವು. ಮನೆತುಂಬ ಆಳುಕಾಳುಗಳು. ನನ್ನ ನ್ಯಾನಿಯೇ ನನ್ನನ್ನು ಬೆಳೆಸಿದ್ದು. ಆಕೆ ಕ್ಯಾಥೊಲಿಕ್‌ ಪ್ರತಿ ಭಾನುವಾರವೂ ತಪ್ಪದೇ ಚರ್ಚ್‌ಗೆ ಕರೆದೊಯ್ಯುತ್ತಿದ್ದಳು. ಆಗಿನ್ನೂ ಅಪ್ಪಅಮ್ಮನಿಗೆ ಗಾಢನಿದ್ದೆ. ವಿಭಿನ್ನ ಧರ್ಮದವರೊಂದಿಗೆ ತುಂಬ ಸಹಜವಾಗಿ ಬೆರೆಯುತ್ತಿದ್ದೆವು. ಯಾರೂ ಬೇರೆ ಎನ್ನಿಸುತ್ತಲೇ ಇರಲಿಲ್ಲ. ಸಬೀನ್‌ಳಲ್ಲೂ ವಿಶ್ವ ಮಾನವತೆಯ ಬೀಜ ಬಿತ್ತಿದೆ. “ಪ್ರತಿಯೊಬ್ಬರೂ ಒಳ್ಳೆಯವರೇ, ಕೆಟ್ಟವರಿಲ್ಲ. ಅವರ ದೇಶ, ಧರ್ಮ, ಜನಾಂಗಗಳ ಮೇಲೆ ಅವರನ್ನು ಅಳೆಯುವುದು ಸರಿಯಲ್ಲ. ಬಡವ ಬಲ್ಲಿದರೆಂಬ ಬೇಧಬೇಡ. ಎಲ್ಲರೂ ಸಮಾನರೇ. ಎಲ್ಲರನ್ನು ಗೌರವಿಸಬೇಕು,” ಎಂದು ಹೇಳುತ್ತಿದ್ದೆ. ಇಂಥ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬೆಳೆದಳು.
ಆಕೆಯಿನ್ನೂ ಕಿಂಡರ್‌ಗಾರ್ಡನ್‌ನಲ್ಲಿದ್ದಳೇನೋ ಆಗಲೇ ಪ್ರಶ್ನಿಸುವ ಧೈರ್ಯ ಬೆಳೆಸಿಕೊಂಡಿದ್ದಳು. “ದೊಡ್ಡ ಡೋಲು ಹುಡಗರಷ್ಟೇ ಏಕೆ ಬಡಿಯಬೇಕು?” ಎಂದು ಮುಖ್ಯಶಿಕ್ಷಕಿಯನ್ನು ಪ್ರಶ್ನಿಸಿದ್ದಳು. ಶಾಲೆಯಲ್ಲಿ “ಹುಡುಗಿಯರೇಕೆ ಕ್ರಿಕೆಟ್‌ ಆಡಬಾರದು?” ಎಂಬ ಪ್ರಶ್ನೆ ಸಿದ್ಧವಿತ್ತು. ಯಾವುದಕ್ಕೂ ಅವಳನ್ನು ತಡೆಯಲಿಲ್ಲ. “ನಿನ್ನ ಹೃದಯದ ಮಾತು ಕೇಳು, ಕನಸಿನ ಬೆನ್ನುಹತ್ತು, ಮಾಡಬೇಕೆನಿಸಿದ್ದನ್ನು ಮಾಡು, ಸಾಧನೆಯ ಹಾದಿಯಲ್ಲಿ ಯಾವ ಅಡ್ಡಿಯೂ ಬರಬಾರದು,” ಎನ್ನುತ್ತಿದ್ದೆ.
ಸಬೀನ್‌ಗೆ ಆಗ ೧೯ ವರ್ಷವಾಗಿತ್ತು. ಒಂದು ದಿನ ಬಂದವಳೇ “ಅಮ್ಮಾ ನನಗಾಗಿ ನೀನು ಈ ಮದುವೆಯನ್ನು ಸಹಿಸಿಕೊಳ್ಳಬೇಕಿಲ್ಲ,” ಎಂದಳು. ತಾನೇ ಹೋಗಿ ವಕೀಲರನ್ನು ಕಂಡು, ಎಲ್ಲವನ್ನೂ ವ್ಯವಸ್ಥೆ ಮಾಡಿ ಆಕೆಯ ಅಪ್ಪನ ಸಹಿಯನ್ನೂ ಮಾಡಿಸಿದಳು. ಎಲ್ಲರಿಗಿಂತ ಬೇರೆಯೇ. ವಿಭಿನ್ನ ಚಿಂತನೆ, ನೇರ ನಡೆನುಡಿ, ಹೇಳಬೇಕೆನಿಸಿದ್ದನ್ನು ಸ್ಪಷ್ಟವಾಗಿ ಯಾವುದೇ ಹಿಂಜರಿಕೆಯಿಲ್ಲದೆ ಹೇಳಿಬಿಡುತ್ತಿದ್ದಳು.
ಆಕೆ ಬರಿ “ಮಾನವ ಹಕ್ಕುಗಳ ಹೋರಾಟಗಾತಿ,’ “ಕಲಾವಿದೆ” ಊಹೂಂ ಹೀಗೆ ಯಾವುದೋ ಒಂದು ಚೌಕಟ್ಟಿನಲ್ಲಿ ಆಕೆಯನ್ನು ಬಂಧಿಸಿಡುವುದು ಸಾಧ್ಯವೇ ಇಲ್ಲ. ಆಕೆಯದ್ದು ಒಂದೇ ನಿಲುವು. ತಪ್ಪು ಕಂಡಾಗ ಅದನ್ನು ಖಂಡಿಸಲು ದನಿಎತ್ತುತ್ತಿದ್ದಳು. ಯಾವುದೋ ಒಂದು ವಿಷಯಕ್ಕೆ ಹೋರಾಟ ಸೀಮಿತವಾಗಿರಲಿಲ್ಲ. ಪ್ರತಿವ್ಯಕ್ತಿಯ ಹಕ್ಕೂ ಆಕೆಗೆ ಮುಖ್ಯವಾಗಿತ್ತು.

ಒಂದೊಂದು ನಟ್ಟಿರುಳು ಎದ್ದು ಅಲ್ಪಸಂಖ್ಯಾತರು, ದಮನಿತ ಗುಂಪುಗಳೊಂದಿಗೆ ಕೂಡುತ್ತಿದ್ದಳೂ. ನೀವು ಒಂಟಿಯಲ್ಲ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭಾವ ಮೂಡಿಸುವುದು ಅಗತ್ಯ ಎಂಬುದು ಆಕೆಯ ಅನಿಸಿಕೆ.
ಆಕೆಯ ಕೆಲಸಗಳ ಬಿರುಸು ನೋಡುತ್ತಿದ್ದ ನಾನು ಆಗಾಗ ಹೇಳುತ್ತಿದ್ದೆ,“ನೋಡುತ್ತಿರು ಎಂದೋ ಒಂದುದಿನ ನಿನ್ನ ಬೆನ್ನಿಗೆ ಗುಂಡು ಬೀಳುತ್ತದೆ. ಆದರೆ ನೀನು ಮಾಡಬೇಕೆನಿಸಿದ್ದನ್ನು ಮಾಡದಂತೆ ತಡೆಯುವ ತಾಕತ್ತು ಅದಕ್ಕಿಲ್ಲ. ಹಾಗೊಂದು ವೇಳೆ ಏನೇ ಆದರೂ ಅದನ್ನು ಎದುರಿಸುವುದನ್ನು ನಾನು ಕಲಿಯಬೇಕಷ್ಟೆ. ನಾನೀಗ ಮಾಡುತ್ತಿರುವುದೂ ಅದನ್ನೇ”.
ಸಾಯುವಾಗಲೂ ಆಕೆಯ ಮುಖದಲ್ಲಿ ಭೀತಿಯಿರಲಿಲ್ಲ, ಒಂದೇಒಂದು ನೋವಿನ ಕೂಗು, ಒದ್ದಾಟ, ಹುಬ್ಬುಗಂಟು ಊಹೂಂ ಏನೂ ಇರಲಿಲ್ಲ. ಶಾಂತವಾಗಿದ್ದಳು ಕತ್ತು ಪಕ್ಕಕ್ಕೆವಾಲಿತ್ತು ಅಷ್ಟೆ. ಘನತೆಯ ಸಾವು. ಅನುಕ್ಷಣವೂ ಅರ್ಥಪೂರ್ಣವಾಗಿ ಬದುಕಿದಳು.
ನನ್ನ ನೋವು ಈ ಜೀವಕ್ಕಂಟಿದ್ದು, ಅದು ನನಗೆ ಗೊತ್ತು. ಆ ಬಗ್ಗೆ ಸದ್ಯ ಚಿಂತಿಸುವುದು ಬೇಡ ಅದು ನಾಳೆಗಿರಲಿ ಎಂದು ಸಮಾಧಾನಿಸಿಕೊಳ್ಳುತ್ತೇನೆ.
ಅಂದು ತಾಗಿದ ಗುಂಡು ಇನ್ನೂ ಬೆನ್ನಲ್ಲೇ ಇದೆ. ಅದೀಗ ಜೀವನ ಸಂಗಾತಿ.. ಮಗಳ ನೆನಪಿನಂತೆ...


ಕೊಸರು: ಮೆಹನಾಜ್‌ ಮಹಮೂದ್‌ ಪೂರ್ವಪ್ರಾಥಮಿಕ ಶಿಕ್ಷಣದ ಗುರು ಎಂದೇ ಹೆಸರಾದವರು. ಪಾಕಿಸ್ತಾನದ ಗ್ರಾಮಾಂತರ ಮತ್ತು ಕೊಳಗೇರಿಗಳಲ್ಲಿ ಶಿಕ್ಷಣದ ತಂಗಾಳಿ ಬೀಸುವಂತೆ ಮಾಡಿದವರು 

Monday, May 4, 2015

ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಮೊಹಮದ್‌ ನಶೀದ್‌ ಅಪ್ಪಟ ಪರಿಸರ ಪ್ರೇಮಿ, ಪ್ರಜಾತಂತ್ರವನ್ನು ತರಲು ಹೋರಾಡಿದವರು. ಅವರ ಬಂಧನವಾಗಿದೆ. ಅವರ ಬಿಡುಗಡೆಗಾಗಿ ವಿಶ್ವದ ಒತ್ತಡ ಹೆಚ್ಚಿದೆ. ಜನ ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ಕಡಲ ಒಡಲಲ್ಲಿ, ಅದರ ತಡಿಯಲ್ಲಿ ಶಾಂತಿಯುತ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟಿಸುತ್ತಿರುವವರ ಮೇಲೆ ಮುರಿದುಬಿದ್ದ ಸರಕಾರ ಪ್ರತಿಪಕ್ಷ ಮುಖಂಡನೂ ಸೇರಿದಂತೆ ೧೯೨ ಮಂದಿಯನ್ನು ಬಂಧಿಸಿದೆ. 
My Articles @ Vijaayakarnataka http://vijaykarnataka.indiatimes.com/edit/columns/Vyaktigata-Nasheed-is-friendly-of-the-environment-democracy/articleshow/47133795.cms


 
Designed by Lena