ಹಸೆಯ ಮೇಲೆ ಹದಿನಾಲ್ಕರ ಹರೆಯದ ಹೆಣ್ಣು ೩೭ರ ಗಂಡು. ಇನ್ನೂ ತನ್ನ ಹದಿಹರೆಯದ ಭಾವನೆಗಳನ್ನೇ ಅರ್ಥ ಮಾಡಿಕೊಳ್ಳಲು ಹೆಣಗುವ ಬಾಲೆಗೆ ಮದುವೆ.
ದುಡಿಯಲು ದೇಹದಲ್ಲಿ ಶಕ್ತಿಯೇ ಇಲ್ಲ. ಆದರೂ ಬದುಕಲೇ ಬೇಕಲ್ಲ. ಹಾಗಾಗಿ ತುತ್ತಿನ ಚೀಲ ತುಂಬಿಸಲು ಮಗನನ್ನು ಶಾಲೆ ಬಿಡಿಸಿ ಕೆಲಸಕ್ಕೆ ಹಚ್ಚಿದ ತಂದೆ.
ಅಪ್ಪನಿಲ್ಲ ಅಮ್ಮನೂ ಇಲ್ಲ. ಪುಟ್ಟ ಹೆಗಲಿಗೆ ತಮ್ಮ ತಂಗಿಯರ ಬದುಕು ಕಟ್ಟುವ ಜವಾಬ್ದಾರಿ. ಬೆಳಗಿನ ಹೊತ್ತು ಓದು ಸಂಜೆ ಕೆಲಸ. ಜತೆಯಾಗಿದ್ದು, ಪುಟ್ಟ ಕೈಗಳಿಗೆ ಕಸವು ತುಂಬಿದ್ದು ತಮ್ಮ ತಂಗಿಯರನ್ನು ಚೆನ್ನಾಗಿ ಓದಿಸಿ ಸಮಾಜದಲ್ಲಿ ಗೌರವಾನ್ವಿತರನ್ನಾಗಿ ಮಾಡಬೇಕೆನ್ನುವ ಕನಸು.
ಮೇಲಿನ ಎಲ್ಲ ಚಿತ್ರಣಗಳಲ್ಲೂ ಒಂದು ಅಂಶವಂತೂ ಸಾಮಾನ್ಯ. ಇಲ್ಲಿ ಪರಿಸ್ಥಿಯ ಕೈಗೊಂಬೆಯಾಗಿರುವವರೆಲ್ಲ ಮಕ್ಕಳೇ. ಅಷ್ಟೇಅಲ್ಲ ಈ ಮಕ್ಕಳೆಲ್ಲ ಒಂದೋ ಎಚ್‌ಐವಿ ಮತ್ತು ಏಡ್ಸ್ ನಿಂದಾಗಿ ತಂದೆ ತಾಯಿರನ್ನು ಕಳೆದು ಕೊಂಡವರು ಇಲ್ಲವೇ ತಂದೆ ತಾಯಿಯರಿಂದ ಸೋಂಕನ್ನು ಪಡೆದವರು.
ಈ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಮೊಗೆದಷ್ಟೂ ಮುಗಿಯದ ಅಡಚಣೆಗಳು. ಆಡುವ, ಓಡುವ, ಓದುವ ಉತ್ಸಾಹಕ್ಕೆ ಒದಗದ, ಅಡಿಗಡಿಗೆ ಕೈಕೊಡುವ ಆರೋಗ್ಯ, ಪೌಷ್ಠಿಕ ಆಹಾರವನ್ನು ನೀಡಲಾಗದ ಬಡತನ, ಸಮಾಜದ ಮುಖ್ಯವಾಹಿನಿಗೆ ಬರಲಾಗದ ಸಮಾಜದ ಕಳಂಕ ತಾರತಮ್ಯಗಳಿಂದ ಬಡವಾಗಿರುವ ಈ ಕಂದಮ್ಮಗಳ ಬದುಕನ್ನು ಹತ್ತಿರದಿಂದ ನೋಡಿದವರ ಕಣ್ಣು ಮಂಜಾಗುವಂತೆ ಮಾಡುತ್ತದೆ.
“ಕೆಲವು ದಿನಗಳ ಹಿಂದಷ್ಟೇ ನನಗೆ ಅಮ್ಮನ ಪಾಸಿಟಿವ್ ಸ್ಥಿತಿಯ ಬಗ್ಗೆ ಗೊತ್ತಾಯ್ತು. ಈಗಲೂ ನನಗೆ ಅದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಅಪ್ಪ ಸ್ವಲ್ಪ ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ಈಡಾಗಿ ತೀರಿಕೊಂಡರು. ಆಗಲೇ ವೈದ್ಯರು ಅಮ್ಮನಿಗೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಹೇಳಿದ್ದು. ಅಪ್ಪನನ್ನು ಕಳೆದುಕೊಂಡಿದ್ದು ಒಂದು ಆಘಾತವಾದರೆ ಈಗ ಅಮ್ಮನ ಸ್ಥಿತಿ ತಿಳಿದ್ದದ್ದು ಇನ್ನೊಂದು. ಅಪ್ಪ ಸತ್ತಿದ್ದು, ಅಮ್ಮನಿಗೆ ಎಚ್‌ಐವಿ ಸೋಂಕಿರುವುದು ಗೊತ್ತಾಗಿ ನಮ್ಮ ಬಂಧುಗಳೆಲ್ಲ ನಮ್ಮಿಂದ ದೂರವಾಗಿದ್ದಾರೆ.’ ಎನ್ನುತ್ತಾಳೆ ಗೌರಿ (ಹೆಸರುಗಳನ್ನು ಬದಲಿಸಲಾಗಿದೆ).
ಮೊದಲೇ ಹದಿಹರೆಯ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಸಂಕ್ರಮಣ ಕಾಲ. ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ಗಮನಿಸುವ ಗೊಂದಲಗಳನ್ನು ನಿಭಾಯಿಸಲು ಹೆಣಗುವ ಕಾಲ. ಮಾದರಿಗಳಿಗಾಗಿ ಹುಡುಕುವ, ವ್ಯಕ್ತಿತ್ವ ಮೌಲ್ದ್ ಆಗುವುದು ಈಗಲೇ. ಇಷ್ಟೆಲ್ಲಾ ಸಮಸ್ಯೆಗಳೊಂದಿಗೆ ಹೆಣಗುವ ಮಕ್ಕಳು ಎಚ್‌ಐವಿ ಸೋಂಕಿನಿಂದಾಗಿ ಸಮಾಜದಲ್ಲಿನ ಕಳಂಕ ಮತ್ತು ತಾರತಮ್ಯವನ್ನು ಎದುರಿಸಲು ಇನ್ನೂ ಅವರ ಮನಸ್ಸು ಸನ್ನದ್ಧವಾಗಿರುವುದಿಲ್ಲ.
ಬಾಲಕ ಪಾಲ್ ಹೇಳುವಂತೆ’ “ಎಚ್‌ಐವಿ ಸ್ಥಿತಿಯ ಬಗ್ಗೆ ತಿಳಿದ ಮೊದ ಮೊದಲು ಅಪ್ಪ- ಅಮ್ಮನನ್ನು ಕಂಡರೆ ವಿಪರೀತ ಸಿಟ್ಟು ಬರುತ್ತಿತ್ತು. ಅವರೊಂದಿಗೆ ಮುಖ ಕೊಟ್ಟು ಮಾತನಾಡಲೂ ಬೇಸರವಾಗುತ್ತಿತ್ತು. ವರ್ಲ್ದ್ ವಿಷನ್ ನೀಡುತ್ತಿದ್ದ ಲೈಫ್ ಸ್ಕಿಲ್ ಎಜ್ಯುಕೇಷನ್ ಕಾರ್ಯಕ್ರಮಗಳಿಗೆ ಹಾಜರಾದೆ. ಹಲವಾರು ತರಬೇತಿಗಳನ್ನು ಪಡೆದೆ. ಅನೇಕ ಬಾರಿ ಆಪ್ತಸಮಾಲೋಚನೆಗೆ ಬಂದೆ. ಈಗ ನಾನು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೇನೆ. ಅಪ್ಪ ಅಮ್ಮನನ್ನು ನಾನು ಪ್ರೀತಿಯಿಂದ ನೋಡಿಕೊಳ್ಳಬೇಕೆಂಬುದು ನನಗೆ ತಿಳಿದಿದೆ. ಹಾಗೆಯೇ ನಾನು ಮುಂದೆ ಓದಿ ಎಚ್‌ಐವಿ ಮತ್ತು ಏಡ್ಸ್ ಬಗ್ಗೆ ಅರಿವು ಮೂಡಿಸಲು, ನನ್ನಂತಹ ಮಕ್ಕಳಿಗೆ ನೆರವಾಗಲು ಬಯಸುತ್ತೇನೆ” ಎನ್ನುತ್ತಾನೆ.
“ನನ್ನ ಅಪ್ಪ ಲಾರಿ ಚಾಲಕ. ಕಳೆದ ಒಂದು ಒಂದೂವರೆ ವರ್ಷದಿಂದ ತೀರಾ ನಿಶ್ಯಕ್ತನಾಗಿದ್ದಾನೆ. ವೈದ್ಯರು ಪರೀಕ್ಷಿಸಿ ಅಪ್ಪನಿಗೆ ಎಚ್‌ಐವಿಯ ಜತೆಗೆ ಕ್ಷಯವೂ ಇದೆ ಎಂದು ಹೇಳಿದರು. ಮನೆಯಲ್ಲಿ ದುಡಿಯುವವರಿಲ್ಲ. ಅದಕ್ಕಾಗಿಯೇ ಅಪ್ಪ ನನ್ನನ್ನು ಶಾಲೆ ಬಿಡಿಸಿ ಕೆಲಸಕ್ಕೆ ಹಚ್ಚಿದ. ನನಗೆ ಓದಲು ಆಸಕ್ತಿ. ನನ್ನ ಬಗ್ಗೆ ತಿಳಿದ ವಲ್ದ್ð ವಿಷನ್ ಸಂಸ್ಥೆ, ಅಪ್ಪನ ಬಳಿ ಮಾತನಾಡಿ ನನ್ನನ್ನು ಓದಲು ಕಳುಹಿಸಲು ಒಪ್ಪಿಸಿದರು” ಎನ್ನುತ್ತಾನೆ ಕುಮಾರ್.
“ಅಪ್ಪ ಅಮ್ಮಂದಿರಿಗೂ ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಆಸೆಯೇನೋ ಇದೆ. ಆದರೆ ಅನೇಕ ಮನೆಗಳಲ್ಲಿ ದುಡಿಯಲು ಇಬ್ಬರಿಗೂ ಶಕ್ತಿಯಿಲ್ಲ. ನಿಶ್ಯಕ್ತಿಯಿಂದಾಗಿ ಹೆಚ್ಚಿನ ಕೆಲಸ ಮಾಡಲಾಗುವುದಿಲ್ಲ. ಅಲ್ಲಿಗೆ ಬಡತನ ಮೆಲ್ಲನೆ ನುಸುಳುತ್ತದೆ. ಮಕ್ಕಳ ಶಾಲೆಯ ಫೀಸ್ ಕಟ್ಟಲಾಗುವುದಿಲ್ಲ. ಮಕ್ಕಳನ್ನು ಶಾಲೆ ಬಿಡಿಸಿ ಪುಡಿಗಾಸು ದುಡಿಯಲು ಕೆಲಸಕ್ಕೆ ಹಚ್ಚುತ್ತಾರೆ.” ಎಂದು ಎನ್‌ಜಿಒ ಒಂದರಲ್ಲಿ ಸ್ವಯಂಸೇವಕಿಯಾಗಿ ದುಡಿಯುತ್ತಿರುವ ಮಮತಾ.
“ಅಪ್ಪ ಅಮ್ಮಂದಿರಿಲ್ಲದ ಎಷ್ಟೋ ಎಚ್‌ಐವಿ ಸೋಂಕಿತ ಮಕ್ಕಳು ಅವರ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿವೆ. ಆದರೆ ಅಲ್ಲಿಯೂ ಅವರ ಪರಿಸ್ಥಿತಿ ಉತ್ತಮವಾಗಿಲ್ಲ. ತೀವ್ರ ಸ್ವರೂಪದ ಕಳಂಕ ತಾರತಮ್ಯಗಳನ್ನು ಎದುರಿಸುತ್ತಿವೆ. ಇತ್ತೀಚೆಗೆ. ಹದಿನಾಲ್ಕರ ಪುಟ್ಟ ಸೋಂಕಿತ ಬಾಲಕಿಯನ್ನು ೩೭ ವರ್ಷದ ಸೋಂಕಿತ ಗಂಡಿಗೆ ಕೊಟ್ಟು ಮದುವೆ ಮಾಡುವ ಯತ್ನ ನಡೆಯಿತು. ಹೇಗೋ ವಿಷಯ ತಿಳಿದ ನಾವು ಅದನ್ನು ತಪ್ಪಿಸಿದೆವು. ಆಪ್ತ ಸಮಾಲೋಚನೆಯ ಸಮಯದಲ್ಲಿ ಅಜ್ಜಿ ಹೇಳಿದ್ದು ನಮ್ಮ ಮನಸ್ಸನ್ನು ಕಲಕಿ ಬಿಟ್ಟಿತು. ಅವಳಿಗೆ ಯಾರೂ ಇಲ್ಲ ಹೀಗಾದರೂ ಆಸರೆ ಸಿಗಲಿ ಎಂದು ಆಶಿಸುತ್ತಿದ್ದೆವು. ನೀವು ಅದಕ್ಕೂ ಕಲ್ಲು ಹಾಕಿದಿರಿ. ಹರೆಯದ ಹುಡುಗಿ, ಮೇಲಾಗಿ ಎಚ್‌ಐವಿ ಸೋಂಕು. ಎಲ್ಲಿಂದ ಗಂಡು ಹುಡುಕೋಣ. ಹೇಗೂ ಅವನಿಗೂ ಸೋಂಕಿದೆ. ಅವಳಿಗೂ ಆಸರೆಯಾಗುತ್ತಿತ್ತು ಎಂದರು.” ಎಂದು ಮಕ್ಕಳ ಆಪ್ತ ಸಮಾಲೋಚನೆ ಮಾಡುವ ವರ್ಲ್ದ್ ವಿಷನ್‌ನ ಕಮ್ಯುನಿಟಿ ಹೆಲ್ತ್ ಕೋಆರ್ಡಿನೇಟರ್ ಜಾನ್ ಕಾಮಾಚಿಯನ್.
“ಎಚ್‌ಐವಿ ಜಾತಿ, ಮತ, ವರ್ಣಬೇಧ, ರಾಷ್ಟ್ರೀಯತೆಗಳನ್ನು ಅಳಿಸಿ ಹಾಕಿದೆ. ಇದು ಕೇವಲ ಆರೋಗ್ಯಕ್ಕೆ ಸಂಬಂಧಿಸಿದ ವಿಷಯ ಮಾತ್ರವಾಗಿರದೆ. ಸಾಮಾಜಿಕ ವಿಷಯವಾಗಿ ಬೆಳೆದು ಬಿಟ್ಟಿದೆ. ದೊಡ್ಡವರು ಮಕ್ಕಳು ಇದರಿಂದ ಬಳಲುತ್ತಿದ್ದಾರೆ. ಅದರಲ್ಲೂ ಮಕ್ಕಳ ಸ್ಥಿತಿ ಗಂಭೀರವಾಗಿದೆ. ಮಕ್ಕಳಿಗೆ ಸರಿಯಾದ ಆಹಾರ ದೊರಕದೆ ಅವರ ಅಭಿವೃದ್ಧಿ ಕುಂಠಿತವಾಗುತ್ತಿದೆ. ಮಕ್ಕಳು ಉತ್ತಮ ಆರೋಗ್ಯ ಹೊಂದಲು ಮತ್ತು ರಕ್ತದಲ್ಲಿನ ಸಿಡಿ-೪ ಕಡಿಮೆಯಾಗದಿರಲು ಪೌಷ್ಠಿಕ ಆಹಾರ ಅತ್ಯಂತ ಅಗತ್ಯ ಆದರೆ ಅವರಿಗೆ ಅದೂ ದೊರೆಯುತ್ತಿಲ್ಲ. ಎಷ್ಟೋ ಕುಟುಂಬಗಳಲ್ಲಿ ಮಕ್ಕಳಿಗೆ ಒಂದು ಹೊತ್ತಿನ ಊಟವೂ ದೊರೆಯುತ್ತಿಲ್ಲ. ಮಕ್ಕಳ ಕುಟುಂಬದ ಆಸರೆಯಲ್ಲಿಯೇ ಖುಷಿಯಾಗಿರುತ್ತಾರೆ ಎಂಬುದು ನಿಜ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸೋಂಕಿತ ನಿಶ್ಯಕ್ತ ತಂದೆ ತಾಯಿಗಳಿಗೆ ದುಡಿಯಲು ಶಕ್ತಿಯಿಲ್ಲ. ಮಕ್ಕಳಿಗೆ ಒಂದು ಹೊತ್ತಿನ ಊಟವನ್ನು ನೀಡಲೂ ಅವರಿಗೆ ಆಗುತ್ತಿಲ್ಲ” ಎಂದು ಮಿಲನ ಕೌಟುಂಬಿಕ ಬೆಂಬಲ ಮತ್ತು ಆಪ್ತಸಮಾಲೋಚನಾ ಕೇಂದ್ರದ ನಿದೇಶಕಿ ಜ್ಯೋತಿ ಕಿರಣ್ ಹೇಳುತ್ತಾರೆ.
“ಎಷ್ಟೋ ಮನೆಗಳಲ್ಲಿ ತಂದೆ ತಾಯಿ ಇಬ್ಬರೂ ಇಲ್ಲ. ಎಚ್‌ಐವಿಯಿಂದಾಗಿ ಬಂಧುಗಳೂ ಹತ್ತಿರ ಸೇರಿಸುತ್ತಿಲ್ಲ. ಹಾಗಾಗಿ ಮಕ್ಕಳೇ ತಮ್ಮ ತಂಗಿಯರ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಬೆಳಿಗ್ಗೆ ಶಾಲೆಗೆ ಹೋಗಿ ಸಂಜೆ ಕೆಲಸ ಮಾಡಿ ಮಕ್ಕಳನ್ನು ಪೊರೆಯುತ್ತಿದ್ದಾರೆ. ಈ ಪುಟ್ಟ ಬಾಲೆಯರ ಸ್ಥೈರ್ಯ ಮೆಚ್ಚುವಂತಹುದ್ದೇ. ಆದರೂ ಈ ಪುಟ್ಟ ಮಕ್ಕಳ ಹೆಗಲಿಗೆ ಈ ಹೊಣೆಯನ್ನು ವರ್ಗಾಯಿಸುವಂತಾದದ್ದು ನಮ್ಮ ಸಮಾಜದ ಕ್ರೌರ್ಯಕ್ಕೆ, ಎಚ್‌ಐವಿ ಬಗೆಗಿನ ತಿಳಿವಳಿಕೆಯ ಕೊರತೆಗೆ ಹಿಡಿದ ಕನ್ನಡಿಯಾಗಿದೆ ಎಂದು ವಿವರಿಸುತ್ತಾರೆ ಜಾನ್.
ಇಂದು ಅಂತಾರಾಷ್ಟ್ರೀಯ ಮಕ್ಕಳ ದಿನ. ನೂರಾರು ಹೇಳಿಕೆಗಳನ್ನು ಕೊಡುತ್ತೇವೆ. ಹೆಚ್ಚೆಂದರೆ ಒಂದಷ್ಟು ಚಾಕೊಲೇಟ್ಸು, ಸಾಧ್ಯವಾದರೆ ಸ್ವೀಟ್ಸು ಕೊಟ್ಟು ಆಟವಾಡಿಸಿ ನಕ್ಕು ನಗಿಸಿ ಮುಗಿಸಿ ಬಿಡುತ್ತೇವೆ. ಆದರೆ ನಿಜವಾಗಲೂ ನಾವು ನಮ್ಮ ಮಕ್ಕಳಿಗೆ ಬಾಲ್ಯವನ್ನು ಕೊಡುತ್ತಿದ್ದೇವಾ, ಮುಂದೆ ನಮ್ಮ ಸಮಾಜದ ನವನಿರ್ಮಾಣ ಮಾಡುವ ಈ ಭಾವಿ ನಾಗರಿಕರ ಭವಿಷ್ಯವನ್ನು ಸರಿಯಾಗಿ ರೂಪಿಸುತ್ತಿರುವೆವಾ ಎಂಬುದರ ಬಗ್ಗೆ ಗಂಭೀರ ಚಿಂತನೆ ನಡೆಸುವ ತುರ್ತು ಅಗತ್ಯ ಈಗ ಎದುರಾಗಿದೆ.
Wednesday, June 9, 2010
Subscribe to:
Comments (Atom)