ಕಣ್ಣ ಹನಿ ಜಾರಿದರೆ ಅದನ್ನು ತೊಡೆದು ಕೊಳ್ಳಲು, ಮಾತು ಬೇಡವಾಗಿ ಬರಿ ಸ್ಪರ್ಶದಲ್ಲೇ ತಿಳಿಸಲು, ದುಃಖದ ಹೊರೆ ಹೆಚ್ಚಾದಾಗ ಅಪ್ಪಿಕೊಂಡು ಅತ್ತು ಹಗುರಾಗಲು ಕೈಗಳಿಲ್ಲ. ಖುಷಿಯಾದಾಗ ಕುಣಿಯಲು, ಮನಬಂದಂತೆ ಆಡಿ ನಲಿಯಲು, ಓಡಾಡಲು ಕಾಲುಗಳಿಲ್ಲ, ಒಂದೇ ಒಂದು ಕ್ಷಣ ಕೈ ಕಾಲಿಲ್ಲದ ಆ ಜೀವನದ ಬಗ್ಗೆ ಯೋಚಿಸಿದರೂ ಅಸಹಾಯಕತೆ, ನನ್ನನ್ನೇಕೆ ಹೀಗೆ ಮಾಡಿದೆ ಎಂಬ ಸಿಟ್ಟು ಕಾಡುತ್ತದಲ್ಲ.....
ಆದರೆ ೨೮ ರ ಹರೆಯದ ಆಸ್ಟ್ರೇಲಿಯಾದ ನಿಕ್ ವುಜಿಕಿಕ್ ಹಾಗಲ್ಲ. ಆತನಿಗೆ ಹುಟ್ಟಿನಿಂದಲೇ ಕೈಕಾಲುಗಳಿಲ್ಲ. ಮಗುವನ್ನು ನೋಡಿದ ತಂದೆತಾಯಿಗಳಿಗೊಂದು ಶಾಕ್. ಮಗನ ಮುಂದಿನ ಬದುಕಿನ ಬಗ್ಗೆ ಚಿಂತಿಸುತ್ತಾ ಆ ತಾಯ್ತಂದೆಗಳು ಅಳುತ್ತಾ ನಿದ್ದೆಯಿಲ್ಲದೆ ಸವೆಸಿದ ಇರುಳುಗಳೆಷ್ಟೋ. ಕೈಕಾಲುಗಳಿಲ್ಲದ ಈ ಮಗು ಎಂದಾದರೊಂದು ದಿನ ಎಲ್ಲರಂತೆ ಬದುಕ ಬಲ್ಲನಾ ಎಂಬ ಚಿಂತ ಅವರನ್ನು ಕಾಡುತ್ತಿತ್ತು. ಆದರೆ ಮುಂದೆ ಇದೇ ಮಗುವಿನ ಮಾತಿನ ಮಾಯಾ ಸ್ಪರ್ಶದಿಂದ ಹಲವು ಖಿನ್ನ ಜೀವಗಳ ಮನಸ್ಸು ಅರಳಲಿದೆ, ಅವನ ಮಾತಿನ ಸೆಲೆ ಹಲವರ ಬದುಕಿಗೆ ಸ್ಫೂರ್ತಿ ತುಂಬಲಿದೆ ಎಂಬುದು ಅವರಿಗೂ ಗೊತ್ತಿರಲಿಲ್ಲ.
ಬಾಲ್ಯದಲ್ಲಿ ಎಲ್ಲ ಮಕ್ಕಳೂ ಎದುರಿಸುವಂತಹ ಸಾಮಾನ್ಯ ಸಮಸ್ಯೆಗಳೆಲ್ಲವನ್ನೂ ನಿಕ್ ಎದುರಿಸಿದ. ಆತನ ಬಾಲ್ಯವೇನೂ ಇತರ ಮಕ್ಕಳಿಗಿಂತ ಭಿನ್ನವಾಗಿರಲಿಲ್ಲ. ತನ್ನ ಸಾಟಿ ಮಕ್ಕಳ ಕಿರುಕುಳಕ್ಕೆ, ಗೇಲಿಗೆ ತುತ್ತಾದ. ಆತ್ಮಸಮ್ಮಾನದ ಕೊರತೆಯಿಂದ ಬಳಲಿದ. ಖಿನ್ನತೆ ಒಂಟಿತನಗಳಿಂದ ಕುಸಿದು ಹೋದ, ನಾನೇಕೆ ಇತರ ಮಕ್ಕಳಂತಿಲ್ಲ. ನನಗೇ ಏಕೆ ಹೀಗೆ ಕೈಕಾಲುಗಳಿಲ್ಲ. ನಾನೇಕೆ ಹೀಗೆ ಹುಟ್ಟಿದೆ? ತನ್ನನ್ನೇ ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ಕೇಳಿಕೊಂಡ. ಎಲ್ಲರಂತೆ ಸಹಜವಾಗಿರಲು ತುಡಿದ. ಅಪ್ಪ ಅಮ್ಮ ತಂದು ಕೊಟ್ಟ ಎಲೆಕ್ಟ್ರಿಕ್ ತೋಳುಗಳನ್ನು ಬಳಸಲು ನೋಡಿದ. ಅವು ಅವನ ಸಂಚಾರಕ್ಕೆ ಮತ್ತಷ್ಟು ತೊಡಕನ್ನುಂಟು ಮಾಡಿದವು. ಅವನ್ನು ಮೂಲೆಗೆತ್ತಿಟ್ಟ. ಛಲದಿಂದ ಹಾಗೆ ನಡಿಗೆಯನ್ನೂ, ದೈನಂದಿನ ಕಾರ್ಯಗಳನ್ನು ಮಾಡುವುದನ್ನು ರೂಢಿಸಿಕೊಂಡ. ಇವೆಲ್ಲದರ ನಡುವೆಯೂ ಅವನನ್ನು ಒಂದು ವಿಷಯ ಪದೇ ಪದೇ ಕಾಡುತ್ತಿತ್ತು. ನನ್ನ ಬದುಕಿಗೊಂದು ಉದ್ದೇಶ, ಸಾರ್ಥಕತೆ ಇದೆಯೇ? ಹಾಗೊಂದು ವೇಳೆ ಇದ್ದರೆ ಅದೇನು ಎಂಬ ಯೋಚನೆ ಬಂತು. ದಿನಕಳೆದಂತೆ ತನ್ನ ಅಂಗವೈಕಲ್ಯವನ್ನು ಒಪ್ಪಿಕೊಂಡ ನಿಕ್, ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುತ್ತಾ ಹೋದ. ತನ್ನ ಸಮಸ್ಯೆಗಳಿಗೇ ತನ್ನದೇ ಪರಿಹಾರಗಳನ್ನೂ ಕಂಡುಕೊಂಡ. ಏಳನೇ ತರಗತಿಯ ಹೊತ್ತಿಗೆ ನಿಕ್ ಶಾಲಾ ಕ್ಯಾಪ್ಟನ್ ಆದ, ವಿದ್ಯಾರ್ಥಿ ಮಂಡಳಿಯ ಜತೆಗೂಡಿ ವಿಕಲಾಂಗರ ಅಗತ್ಯಗಳ ಬಗೆಗಿನ ಪ್ರಚಾರಾಂದೋಲನಗಳನ್ನು ಸಂಘಟಿಸಿದ ಅನೇಕ ಸ್ಥಳೀಯ ಸಂಘ ಸಂಸ್ಥೆಗಳಿಗಾಗಿ ಹಣ ಹೊಂದಿಸುವ ಕಾರ್ಯಕ್ರಮಗಳನ್ನ ಮಾಡಿದ. ಇಲ್ಲೆಲ್ಲಾ ಅವನ ಕೈಹಿಡಿದೆತ್ತಿದ್ದು ಅವನ ಅಪಾರ ಆತ್ಮವಿಶ್ವಾಸ, ತನ್ನ ಬಗ್ಗೆ ಆತನಿಗಿದ್ದ ಅಚಲ ನಂಬುಗೆ. ಅವನೆಲ್ಲ ಕೆಲಸಗಳಿಗೂ ಅವನ ಕುಟುಂಬ ಮತ್ತು ಗೆಳೆಯರ ಪ್ರೋತ್ಸಾಹ ಇದ್ದೇ ಇತ್ತು. ಇವೆಲ್ಲದರ ನಡುವೆ ನಿಕ್ ಓದಿನಲ್ಲಿ ಹಿಂದೆ ಬೀಳಲಿಲ್ಲ. ಓದು ಅವನ ಜೀವನದ ಅವಿಭಾಜ್ಯ ಅಂಗವಾಗಿತ್ತು. ಎರಡು ಪದವಿಗಳನ್ನು ಪಡೆದ. ಹತ್ತೊಂಬತ್ತರ ಹರೆಯದ ಹೊತ್ತಿಗೆ, ತನ್ನದೇ ಉದಾಹರಣೆಯನ್ನು ಮುಂದಿಟ್ಟು, ಮಾತಿನ ಮೂಲಕ ಜನರ ಬದುಕಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡತೊಡಗಿದ.
ಬದುಕಿನಲ್ಲಿ ನಾವು ಎದುರಿಸುವ ಪ್ರತಿ ಸಮಸ್ಯೆ, ಪ್ರತಿ ಘಟನೆಗೂ ಯಾವುದೋ ಉದ್ದೇಶವಿದೆ. ಅದನ್ನು ಎದುರಿಸುವ ನಮ್ಮ ಮನೋಭಾವವೇ ಆ ಸಮಸ್ಯೆಯಿಂದ ಹೊರಬರುವ ಉತ್ತಮ ಮಾರ್ಗವನ್ನೂ ತೋರಿಸುತ್ತದೆ ಎಂಬುದು ನಿಕ್‌ನ ನಂಬುಗೆ.
ಹತ್ತು ಹಲವು ಪ್ರಶಸ್ತಿಗಳು ನಿಕ್‌ನನ್ನು ಹುಡುಕಿಕೊಂಡು ಬಂದಿವೆ. ಈಗ ನಿಕ್ ಅಂತಾರಾಷ್ಟ್ರೀಯ ಮಟ್ಟದ ಎನ್‌ಜಿಒ ಒಂದರ ಅಧ್ಯಕ್ಷನಾಗಿದ್ದಾನೆ. ಹಾಗೆಯೇ ತನ್ನ ಮಾತುಗಾರಿಕೆ ಭಾಷಣಗಳಿಂದ ಸ್ಫೂರ್ತಿ ತುಂಬಲೆಂದೇ Attitude Is Altitude ಕಂಪನಿಯನ್ನೂ ಸ್ಥಾಪಿಸಿದ್ದಾನೆ. ತನ್ನ ಮಾತುಗಾರಿಕೆಯ ಮೋಡಿಯ ಮೂಲಕ ೨೦ಕ್ಕೂ ಹೆಚ್ಚು ದೇಶಗಳಲ್ಲಿನ ಮಕ್ಕಳು, ಹದಿಹರೆಯದವರು ಯುವಕರು, ವ್ಯಾಪಾರಸ್ಥರು ಸಿಈಒಗಳು ಹೀಗೆ ಅನೇಕರಿಗೆ ಬದುಕಿನ ಬಗ್ಗೆ ಪ್ರೀತಿ, ಜೀವನದಲ್ಲಿ ಸ್ಫೂರ್ತಿ ತುಂಬಿದ್ದಾನೆ. ನಿಕ್ ಪ್ರತಿಬಾರಿ ಮಾತನಾಡುವಾಗಲೂ ಜೀವನಕ್ಕೊಂದು ಉದ್ದೇಶ, ಅದಕ್ಕೆ ಕಸವು ತುಂಬಲು ಬೇಕಾದ ಕನಸಿನ ಪ್ರಾಮುಖ್ಯವನ್ನು ಸಾರಿಸಾರಿ ಹೇಳುತ್ತಾನೆ. ಕನಸು ಕಾಣಲು ಹಿಂಜರಿಕೆ ಬೇಡ ಅದರ ಸಾಕಾರದೆಡೆಗೆ ಪುಟ್ಟಪುಟ್ಟ ಹೆಜ್ಜೆಯೂ ಸಾಕು ಗುರಿ ಮುಟ್ಟಲು. ಕಷ್ಟಗಳನ್ನು ಸಮಸ್ಯೆಗಳೆಂದು ಭಾವಿಸದೆ ಅವನ್ನು ಅವಕಾಶಗಳೆಂದು ನೋಡಿ ಹಾಗಿದ್ದಾಗ ದೊಡ್ಡದನ್ನು ಸಾಧಿಸಲು ಸಾಧ್ಯ. ಹೀಗಿದ್ದಾಗ ನಮ್ಮ ಹಾಗು ನಮ್ಮ ಸುತ್ತಮುತ್ತಲಿನವರ ಜೀವನದಲ್ಲಿ ಬದಲಾವಣೆ ತರಲು ಸಾಧ್ಯ. ಸೋಲನ್ನು ಕಲಿಕೆಯಾಗಿ ಪಾಠವಾಗಿ ಅಪ್ಪಿಕೊಳ್ಳಿ, ಸೋಲು ತಪ್ಪಿತಸ್ಥ ಭಾವಕ್ಕೆ ಮತ್ತು ಭಯಕ್ಕೆ ಕಾರಣವಾಗಿ ನಮ್ಮನ್ನು ನಿಂತಲ್ಲೇ ನಿಂತು ಬಿಡುವಂತೆ, ಕುಸಿಯುಂತೆ ಮಾಡುವುದು ಬೇಡ ಎಂದು ತನ್ನದೇ ಉದಾಹರಣೆ ಕೊಟ್ಟು ಹೇಳುತ್ತಾ ಹೋಗುತ್ತಾನೆ.
ಪ್ರತಿ ಮನಯಷ್ಯನ ಜೀವನವನ್ನು ನೋಡುವ ಮನೋಭಾವ ಬದಲಾದರೆ ಜೀವನದಲ್ಲಿ ಅರ್ಧಗೆದ್ದಂತೆ... ಎಷ್ಟು ಸತ್ಯವಾದ ಮಾತು!
ಈತ ನಿಜವಾದ ಯೂತ್ ಐಕಾನ್...
Wednesday, May 12, 2010
Subscribe to:
Comments (Atom)